ಬೆಂಗಳೂರು: ಪಿಎಸ್ಐ ಹಗರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಒಂದೆಡೆ ಅಭ್ಯರ್ಥಿಗಳು ಪ್ರತಿಭಟನೆ ಮಾಡುತ್ತಿದ್ದರೆ ಇನ್ನೊಂದೆಡೆ 22 ಅಭ್ಯರ್ಥಿಗಳ ಮೇಲೆ ಎಫ್ಐಆರ್ ದಾಖಲಾಗಿದೆ. ಬೆಂಗಳೂರಿನ 7 ಪರೀಕ್ಷಾ ಕೇಂದ್ರಗಳಲ್ಲಿ 172 ಅಭ್ಯರ್ಥಿಗಳು ಆಯ್ಕೆ ಆಗಿದ್ದರು. ಇದರಲ್ಲಿ 22 ಅಭ್ಯರ್ಥಿಗಳ ಮೇಲೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ತನಿಖೆ ಮುಂದುವರಿದಂತೆ ಅಭ್ಯರ್ಥಿಗಳ ವಿರುದ್ಧ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಜಾಗೃತ್ ಎಸ್, ಗಜೇಂದ್ರ ಬಿ, ಸೋಮನಾಥ್ ಮಲ್ಲಿಕಾರ್ಜುನಯ್ಯ ಹಿರೇಮಠ್, ರಘುವೀರ್ ಹೆಚ್. ಯು, ಚೇತನ್ ಕುಮಾರ್ ಎಂ. ಸಿ, ರಚನಾ ಹನುಮಂತ ಸೇರಿದಂತೆ ಒಟ್ಟು 22 ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮಾಡಲಾಗುತ್ತಿದೆ. ಈವರೆಗೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ತಲೆ ಮರೆಸಿಕೊಂಡಿದ್ದು, ಅವರನ್ನು ಹುಡುಕುವ ಕಾರ್ಯ ಮುಂದುವರೆದಿದೆ.