ಕರ್ನಾಟಕ

karnataka

ETV Bharat / state

ಪೊಲೀಸ್ ಸಬ್‌ಇನ್ಸ್​​ಪೆಕ್ಟರ್ ಕೂಡ ದೋಷಾರೋಪ ಪಟ್ಟಿ ಸಲ್ಲಿಸಬಹುದು: ಹೈಕೋರ್ಟ್ - ಬೆಂಗಳೂರು ಸಾಮೂಹಿಕ ಆತ್ಮಹತ್ಯೆ ಪ್ರಕರಣ

ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪಿಎಸ್‌ಐ ಅವರಿಗೂ ಇದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

High court
ಹೈಕೋರ್ಟ್

By

Published : May 27, 2022, 6:40 AM IST

ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೂ(ಪಿಎಸ್‌ಐ) ಇದೆ ಎಂದಿರುವ ಹೈಕೋರ್ಟ್, ಇದೇ ಆಧಾರದಲ್ಲಿ ಜಾಮೀನು ಕೋರಿದ್ದ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ.

ಪಿಎಸ್ಐಗೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರವಿಲ್ಲ. ಹಾಗಾಗಿ ತಮಗೆ ಜಾಮೀನು ನೀಡಬೇಕು ಎಂದು ಕೋರಿ ವಾರ ಪತ್ರಿಕೆ ಸಂಪಾದಕ ಹಲ್ಲಗೆರೆ ಶಂಕರ್ ಅಳಿಯಂದಿರಾದ ಇ.ಎಸ್.ಪ್ರವೀಣ್ ಕುಮಾರ್ ಹಾಗೂ ಈಡಿಗ ಶ್ರೀಕಾಂತ್ ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಕೆ.ನಟರಾಜನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪೀಠ ತನ್ನ ತೀರ್ಪಿನಲ್ಲಿ, ಪ್ರಕರಣದಲ್ಲಿ ಅರ್ಜಿದಾರ ಆರೋಪಿಗಳು ತಮ್ಮ ಕುಟುಂಬ ಸದಸ್ಯರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಮರಣಪತ್ರದಿಂದ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಕುಟುಂಬ ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣವನ್ನು ಸಾಮಾನ್ಯ ಆತ್ಮಹತ್ಯೆ ಎಂದು ಪರಿಗಣಿಸಲಾಗದು. ಸಂತ್ರಸ್ತರು ಮರಣ ಪತ್ರದಲ್ಲಿ ತಮ್ಮ ಸಾವಿಗೆ ನ್ಯಾಯ ಕೋರಿದ್ದಾರೆ. ಆದ್ದರಿಂದ, ಅರ್ಜಿದಾರರಿಗೆ ಜಾಮೀನು ನೀಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: 2021ರ ಸೆಪ್ಟೆಂಬರ್ 17ರಂದು ಬೆಂಗಳೂರಿನ ಮಾಗಡಿ ರಸ್ತೆಯ ತಿಗಳರಪಾಳ್ಯದ ಮನೆಯಲ್ಲಿ ಹಲ್ಲಗೆರೆ ಶಂಕರ್ ಪತ್ನಿ ಭಾರತಿ, ಪುತ್ರಿಯರಾದ ಸಿಂಚನಾ ಕುಮಾರಿ, ಸಿಂಧೂ ರಾಣಿ, ಪುತ್ರ ಮಧುಸಾಗರ್ ಹಾಗೂ ಸಿಂಧೂ ರಾಣಿಯ ಒಂಭತ್ತು ತಿಂಗಳ ಮಗು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೂ ಮುನ್ನ ಇವರು ಬರೆದಿದ್ದ ಪತ್ರದಲ್ಲಿ ಆರೋಪಿಗಳಿಂದ ಅನುಭವಿಸಿದ್ದ ಯಾತನೆ ಮತ್ತು ಕಿರುಕುಳವನ್ನು ವಿವರಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಪೊಲೀಸರು, ಪ್ರವೀಣ್ ಮತ್ತು ಶ್ರೀಕಾಂತ್ ಅವರನ್ನು ಬಂಧಿಸಿದ್ದರು. ನಂತರ ತನಿಖೆ ಪೂರ್ಣಗೊಳಿಸಿದ ಪಿಎಸ್‌ಐ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ:ಸನ್ನಡತೆ ಆಧಾರದ ಮೇಲೆ 12 ಕೈದಿಗಳು ಬಿಡುಗಡೆ.. 7 ಬಾರಿ ರಿಜೆಕ್ಟ್ ಆಗಿದ್ದವರಿಗೆ ಈ ಬಾರಿ ಲಕ್

ಇದನ್ನು ಪ್ರಶ್ನಿಸಿದ್ದ ಆರೋಪಿಗಳು, ದೋಷಾರೋಪ ಪಟ್ಟಿ ಸಲ್ಲಿಸಲು ಪಿಎಸ್ಐಗೆ ಅಧಿಕಾರವಿಲ್ಲ. ಪಿಎಸ್‌ಐ ಪ್ರಕರಣದ ತನಿಖೆ ನಡೆಸಬಹುದಷ್ಟೇ. ಠಾಣೆಯ ಅಧಿಕಾರಿಯಾಗಿರುವ ಇನ್ಸ್‌ಪೆಕ್ಟರ್ ಮಾತ್ರವೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ನಿಯಮ ಪಾಲಿಸಿಲ್ಲವಾದ್ದರಿಂದ ತಮಗೆ ಜಾಮೀನು ನೀಡಬೇಕು ಎಂದು ಕೋರಿದ್ದರು. ವಾದ ತಿರಸ್ಕರಿಸಿರುವ ಪೀಠ, ಪೊಲೀಸ್ ಮಾರ್ಗಸೂಚಿಯಲ್ಲಿ ಪಿಎಸ್‌ಐಗೂ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರವಿದೆ. ಪಿಎಸ್‌ಐ ಸಹ ಠಾಣೆಯ ಉಸ್ತುವಾರಿಯಾಗಿದ್ದಾರೆ. ಎಫ್‌ಐಆರ್ ದಾಖಲಿಸಿರುವ ಪಿಎಸ್‌ಐ ತನಿಖೆ ನಡೆಸಿ, ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಹೀಗಾಗಿ, ಆರೋಪ ಪಟ್ಟಿ ಸಲ್ಲಿಸಲು ಪಿಎಸ್‌ಐಗೆ ಅಧಿಕಾರವಿಲ್ಲ ಅಥವಾ ಅದು ಕಾನೂನುಬಾಹಿರ ಎನ್ನಲಾಗದು ಎಂದು ಸ್ಪಷ್ಟಪಡಿಸಿದೆ.

ABOUT THE AUTHOR

...view details