ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಚುನಾವಣಾ ಗಿಮಿಕ್‌ಗಾಗಿ ಬಂಡಲ್ ಬಜೆಟ್ ಮಂಡಿಸಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಬಜೆಟ್ ತಯಾರಿಗೂ ಮುನ್ನ ಭೇಟಿಯಾಗಿದ್ದರೆ ವಾಸ್ತವಕ್ಕೆ ಹತ್ತಿರವಿರುವ ಬಜೆಟ್ ಮಂಡಿಸಬಹುದಿತ್ತು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
2023-24ನೇ ಸಾಲಿನ ರಾಜ್ಯ ಬಜೆಟ್ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಪೃಥ್ವಿ ರೆಡ್ಡಿ, ಬಿಜೆಪಿಯ ಚುನಾವಣಾ ಖರ್ಚಿಗಾಗಿ ವ್ಯವಸ್ಥೆ ಮಾಡಿಕೊಳ್ಳಲು ಸಿಎಂ ಬಜೆಟ್ ಮಂಡಿಸಿದ್ದಾರೆ. ರೈತರಿಗೆ 3ರಿಂದ 5 ಲಕ್ಷದ ತನಕ ಬಡ್ಡಿರಹಿತ ಸಾಲ ಕೊಡುವುದಾಗಿ ಘೋಷಿಸಿ, ಮುಳುಗುತ್ತಿರುವ ದೋಣಿ ಮೇಲೆ ಇನ್ನಷ್ಟು ಭಾರ ಹೊರಿಸಿ ನಾಶ ಮಾಡಲು ಹೊರಟಿದ್ದಾರೆ. ಹೀಗೆ ರೈತರನ್ನು ಸಾಲದಲ್ಲಿ ಸಿಲುಕಿಸುವ ಬದಲು ಎಂಎಸ್‌ಪಿ, ಬೆಂಬಲ ಬೆಲೆ ಹೆಚ್ಚಿಸಬೇಕಿತ್ತು.
ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಯಾವುದೇ ಪರಿಹಾರವಿಲ್ಲ. ತರಗತಿಗಳನ್ನು ಕಟ್ಟಿದ ಮಾತ್ರಕ್ಕೆ ಶಾಲೆಗಳ ಸಮಸ್ಯೆಗಳು ಬಗೆಹರಿಯುವುದಿಲ್ಲ. ಶಿಕ್ಷಕರಿಗೆ ಉನ್ನತವಾದ ತರಬೇತಿ ನೀಡಬೇಕು. ಸಮವಸ್ತ್ರ ಕೊಡಲು ಸಾಧ್ಯವಾಗದಿರುವುದಕ್ಕೆ ಹೈಕೋರ್ಟ್ ಛೀಮಾರಿ ಹಾಕಿರುವಾಗ ಬೇರೆ ಯೋಜನೆಗಳನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಅಂಗನವಾಡಿ ಮಕ್ಕಳಿಗೆ ಈ ತಿಂಗಳು ಇನ್ನೂ ಮೊಟ್ಟೆ ಹಾಗೂ ಇತರೆ ಆಹಾರ ಪೂರೈಕೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಬಜೆಟ್ ಮಂಡಿಸುವುದಕ್ಕೂ ಮುನ್ನ ಫ್ರೀಡಂ ಪಾರ್ಕ್‌ಗೆ ಹೋಗಿ ಪ್ರತಿಭಟನಾನಿರತರನ್ನು ಮಾತನಾಡಿಸಿದ್ದರೆ, ಜನರ ಸಮಸ್ಯೆಗಳು ಅರಿವಿಗೆ ಬರುತ್ತಿತ್ತು. ಕಳೆದ ಬಜೆಟ್‌ನಲ್ಲಿದ್ದ ಸುಮಾರು ನೂರು ಘೋಷಣೆಗಳು ಬಾಕಿ ಉಳಿದಿದ್ದು, ಈಗ ಅದನ್ನೇ ಮತ್ತೆ ಘೋಷಣೆ ಮಾಡಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ. ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಕೂಡ ಘೋಷಣೆಯಿಲ್ಲ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಪ್ರಸ್ತಾಪವಿಲ್ಲ. ತೆಂಗು ಬೆಳೆಗಾರರಿಗೆ ವಿಶೇಷ ಆರ್ಥಿಕ ವಲಯ ಘೋಷಣೆಯಾಗಿಲ್ಲ. ಎತ್ತಿನ ಹೊಳೆ, ಕೃಷ್ಣಾ ನದಿ ನೀರಿಗೆ ಸಂಬಂಧಿಸಿದ ಯಾವುದೇ ವಿಶೇಷ ಯೋಜನೆಯಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಿಗೆ ನೀರನ್ನು ಹರಿಸಲು ಎನ್.ಎಚ್.ವ್ಯಾಲಿಯ ಮೂರು ಹಂತದ ನೀರು ಶುದ್ಧೀಕರಣ ಮಾಡಲು ಯಾವುದೇ ಪ್ರಸ್ತಾಪವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.