ಬೆಂಗಳೂರು:ರಾಜ್ಯದಲ್ಲಿರುವ ಸ್ಮಶಾನ ಭೂಮಿ ಒದಗಿಸುವ ಸಂಬಂಧ ಜನವಸತಿ ರಹಿತ ಗ್ರಾಮಗಳ (ಬೇಚರಾಕ್ )ಪಟ್ಟಿ ಸಲ್ಲಿಸಲು ಕಾಲಾವಕಾಶ ಕೋರಿದ ಸರ್ಕಾರದ ಕ್ರಮವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ನ್ಯಾಯಾಲಯದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಸ್ಮಶಾನ ಜಾಗವಿಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ, ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹಾಜರಾಗಿ, ರಾಜ್ಯದಲ್ಲಿರುವ ಬೇಚರಾಕ್ ಗ್ರಾಮಗಳ ಪಟ್ಟಿ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಕೋಪಗೊಂಡ ನ್ಯಾಯಮೂರ್ತಿಗಳು, ಶವ ಸಂಸ್ಕಾರಕ್ಕೆ ಸ್ಮಶಾನ ಜಾಗ ಒದಗಿಸಿಕೊಡುವುದು ಸರ್ಕಾರ ಜವಾಬ್ದಾರಿ. 2019ರಲ್ಲಿ ಕೋರ್ಟ್ ಆದೇಶ ಕೊಟ್ಟಿದೆ. ಅದು ಪಾಲಿಸಿಲ್ಲ ಎಂದು 2020ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. ಈಗ 2023 ಬಂದರೂ ಸರ್ಕಾರ ನ್ಯಾಯಾಂಗ ನಿಂದನೆ ಪ್ರಕರಣವನ್ನು ಬೆಳೆಸುತ್ತಲೇ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತು.
ಈ ಗೊಂದಲಗಳಿಗೆ ಬದಲಾಗಿ ಸ್ಮಶಾನ ಜಾಗ ಒದಗಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಪ್ರಮಾಣಪತ್ರ ಸಲ್ಲಿಸಿಬಿಡಿ. ಅದು ಬಿಟ್ಟು ಈ ರೀತಿ ಕಾಲ ತಳ್ಳುವ ಕೆಲಸ ಮಾಡಿದರೆ ನ್ಯಾಯಾಲಯ ಸುಮ್ಮನಿರುವುದಕ್ಕೆ ಸಾಧ್ಯವಾಗುವುದಿಲ್ಲ. ನ್ಯಾಯಾಲಯಕ್ಕೂ ತಾಳ್ಮೆಗೂ ಒಂದು ಮಿತಿ ಇರಲಿದೆ ಎಂದು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ: ಜತೆಗೆ, ಸರ್ಕಾರ ಕೆಲಸ ಮಾಡದಿದ್ದರೆ ಅನಿವಾರ್ಯವಾಗಿ ನ್ಯಾಯಾಲಯ ಕಾನೂನು ಸೇವಾ ಪ್ರಾಧಿಕಾರದ ನೆರವು ಕೇಳಬೇಕಾಗಿದೆ. ಕಾನೂನು ಸೇವಾ ಪ್ರಾಧಿಕಾರದವರು 40 ದಿನಗಳಲ್ಲಿ 5,200 ಗ್ರಾಮಗಳಿಗೆ ತಲುಪಿ ಮಾಹಿತಿ ಸಂಗ್ರಹಿಸಿದ್ದಾರೆ. ಅವರಿಗೆ ಸಾಧ್ಯವಾಗಿರುವುದು ಸರ್ಕಾರದ ಅಧಿಕಾರಿಗಳಿಗೆ ಯಾಕೆ ಸಾಧ್ಯವಾಗುವುದಿಲ್ಲ. ಅಸಲಿಗೆ ಇದಕ್ಕೆ ಅಧಿಕಾರಿಗಳಿಗೆ ಮನಸ್ಸು ಇರಬೇಕು ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಪೀಠ, ಅಂತಿಮವಾಗಿ ಗುರುವಾರ ವೇಳೆಗೆ ಬೇಚರಾಕ್ ಗ್ರಾಮಗಳ ಪಟ್ಟಿ ನೀಡಬೇಕು ಎಂದು ಗಡುವು ನೀಡಿತು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸಲಾಗುವುದು ಎಂದು ಎಚ್ಚರಿಕೆ ನೀಡಿ ವಿಚಾರಣೆಯನ್ನು ಮುಂದೂಡಿತು.
ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಸರ್ಕಾರ ಶವ ಸಂಸ್ಕಾರಕ್ಕೆ ಸ್ಮಶಾನ ಭೂಮಿ ಒದಗಿಸಿರುವ ಸಂಬಂಧ ಪ್ರಮಾಣ ಪತ್ರ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ್ದ ನ್ಯಾಯಪೀಠ ವಸ್ತು ಸ್ಥಿತಿಯನ್ನು ತಿಳಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತ್ತು. ಸರ್ಕಾರದ ಅಂಕಿ - ಅಂಶಗಳಿಗೂ ಮತ್ತು ಪ್ರಾಧಿಕಾರ ಸಂಗ್ರಹಿಸಿದ ಮಾಹಿತಿಗೂ ವ್ಯತ್ಯಾಸವಿದೆ. ರಾಜ್ಯದಲ್ಲಿ ಒಟ್ಟು 29616 ಗ್ರಾಮಗಳಿದ್ದು, ಅದರಲ್ಲಿ 1394 ಬೇಚರಾಕ್’ ಗ್ರಾಮಗಳಿವೆ ಎಂದು ಸರ್ಕಾರ ಹೇಳಿದೆ. ಸರ್ಕಾರದ ವರದಿಯಲ್ಲಿ ಗ್ರಾಮಗಳ ಸಂಖ್ಯೆ ಹೇಳಲಾಗಿದೆಯೇ ಹೊರತು, ಬೇಚರಾಕ್ ಗ್ರಾಮಗಳ ಪಟ್ಟಿ ಇಲ್ಲ ಎಂದು ಪ್ರಾಧಿಕಾರ ನ್ಯಾಯಾಲಯದ ಗಮನಕ್ಕೆ ತಂದಿತ್ತು.
ಇದನ್ನೂಓದಿ:ವರ್ಗಾವಣೆಗೊಂಡ ಪ್ರಾಂಶುಪಾಲರೇ ಬೇಕೆಂದು ಪಟ್ಟು ಹಿಡಿದ ವಿದ್ಯಾರ್ಥಿಗಳು