ಬೆಂಗಳೂರು:ಬಿಐಇಸಿ ಕೋವಿಡ್ ಕೇರ್ ಸೆಂಟರ್ನಲ್ಲಿ ರೋಗಿಗಳ ಆರೈಕೆಗೆ ಬೇಕಾದ ಸಲಕರಣೆಗಳನ್ನು ಬಾಡಿಗೆ ತೆಗೆದುಕೊಳ್ಳುವಾಗ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಹಾಸಿಗೆ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು ಖರೀದಿ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಬಿಐಇಸಿ ಕೋವಿಡ್ ಕೇರ್ ಸೆಂಟರ್ಗೆ ಬೆಡ್ಗಳ ಖರೀದಿಗೆ ಕ್ರಮ: ಬಿಬಿಎಂಪಿ ಆಯುಕ್ತ - ಬಿಐಇಸಿ ಕೋವಿಡ್ ಕೇರ್ ಸೆಂಟರ್
ಕೊರೊನಾ ಸೋಂಕಿತರ ಆರೈಕೆಗೆ ಹಾಸಿಗೆ ಸೇರಿದಂತೆ ಅಗತ್ಯ ಸಲಕರಣೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು ಖರೀದಿ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ.
ಹಾಸಿಗೆ, ಮಂಚ, ಫ್ಯಾನ್, ದಿಂಬು, ನೀರಿನ ಬಾಟಲ್, ಕುರ್ಚಿ ಸೇರಿದಂತೆ ಏಳು ವಸ್ತುಗಳನ್ನು ಆ ಖಾಸಗಿ ಏಜೆನ್ಸಿಯಿಂದಲೇ ಖರೀದಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಸಿಸಿಸಿ ಕೇಂದ್ರಗಳನ್ನು ತಕ್ಷಣಕ್ಕೆ ವ್ಯವಸ್ಥೆ ಮಾಡಬೇಕಿತ್ತು. ಹಾಗಾಗಿ ಸರ್ವೀಸ್ ಪ್ರೊವೈಡ್ ಸಂಸ್ಥೆಗಳಿಂದ ಬಾಡಿಗೆ ತಗೊಂಡ್ವಿ. ಈಗ ಮಾರುಕಟ್ಟೆ ಬೆಲೆಯಲ್ಲಿಯೇ ಅವುಗಳನ್ನು ಖರೀದಿ ಮಾಡುತ್ತೇವೆ ಎಂದು ಅನಿಲ್ ಕುಮಾರ್ ತಿಳಿಸಿದರು.
ಲಾಕ್ಡೌನ್ಗೆ ಸಿದ್ಧತೆ:ಒಂದು ವಾರ ಬೆಂಗಳೂರು ಲಾಕ್‌ಡೌನ್ ಆಗಲಿರುವ ಹಿನ್ನೆಲೆ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಬಿಬಿಎಂಪಿ ವಾರ್ಗೆ ಭೇಟಿ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ ಜಂಟಿ ಆಯುಕ್ತರ ಸಭೆ ನಡೆಸಿದರು. ಲಾಕ್‌ಡೌನ್ ಇಂದು ರಾತ್ರಿಯಿಂದಲೇ ಆರಂಭವಾಗಲಿರುವ ಹಿನ್ನೆಲೆ ನಗರದಲ್ಲಿ ಯಾವ ರೀತಿ ಸಿದ್ಧತೆ ಆಗಬೇಕು, ಏಳು ದಿನದ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೆ ತರುವ ಬಗ್ಗೆ, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಮೂಲ ಸೌಕರ್ಯದ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದರು.
ಸಭೆ ಬಳಿಕ ಮಾತನಾಡಿದ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ವಾರ್ ರೂಂನಲ್ಲಿ ಸಭೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆಗಳು ಇನ್ನೂ ಬೆಡ್ಗಳನ್ನು ಕೊಟ್ಟಿಲ್ಲ. ಇಂದು ಸಂಜೆ ಬೆಡ್ಗಳು ಸಿಗಬೇಕು ಎನ್ನುವ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಖಾಸಗಿ ಲ್ಯಾಬ್ಗಳಲ್ಲಿ ಟೆಸ್ಟ್ ರಿಸಲ್ಟ್ ವಿಳಂಬ ಆಗಬಾರದೆಂದು ಸೂಚನೆ ಕೊಟ್ಟಿದ್ದಾರೆ ಎಂದರು. ಲಾಕ್‌ಡೌನ್ ಸಂದರ್ಭದಲ್ಲಿ ನಿಗದಿತ ಪ್ರದೇಶಗಳಲ್ಲಿ ಆಂಟಿಜೆನ್ ಟೆಸ್ಟ್ ಮುಂದುವರಿಯಲಿದೆ. 130 ತಂಡಗಳಿಂದ ಆಂಟಿಜೆನ್ ಟೆಸ್ಟಿಂಗ್ ನಡೆಯಲಿದೆ. ಈ ತಂಡಗಳಿಗೆ 200 ವಾಹನಗಳನ್ನು ಒದಗಿಸಲಾಗಿದೆ. ಅಲ್ಲದೆ ಸೋಂಕು ಹೆಚ್ಚು ಇರುವ ಪ್ರದೇಶಗಳಲ್ಲಿ ಆಂಟಿಜೆನ್ ಟೆಸ್ಟ್ ಮಾಡುತ್ತಿದ್ದೇವೆ ಎಂದರು.