ಬೆಂಗಳೂರು: ಸರ್ಕಾರೇತರ ಸಂಸ್ಥೆಯೊಂದು ವಸತಿ ಪ್ರದೇಶದ ಕಟ್ಟಡದಲ್ಲಿ ಕ್ಯಾನ್ಸರ್ ರೋಗಿಗಳಿಗೆ ಉಚಿತ ವಸತಿ ವ್ಯವಸ್ಥೆ ಕಲ್ಪಿಸುವುದು ಆತಿಥ್ಯ ಸೇವೆ (Hospitality Service) ಎಂದಾಗುವುದಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಅಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್‌ಗೆ ಬಿಬಿಎಂಪಿ ನೀಡಿದ್ದ ನೋಟಿಸ್ ರದ್ದು ಮಾಡಿತು.
ಅಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಅರ್ಜಿ ಸಲ್ಲಿಸಿರುವ ಸಂಸ್ಥೆ ವಸತಿ ಪ್ರದೇಶದಲ್ಲಿರುವ ಕಟ್ಟಡವನ್ನು ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ವಸತಿ ಸೌಕರ್ಯಕ್ಕಾಗಿ ಬಳಸುತ್ತಿದೆ. ಅಲ್ಲಿ ಯಾವುದೇ ಯಂತ್ರಗಳನ್ನು ಅಥವಾ ಸಾಧನಗಳನ್ನು ಬಳಕೆ ಮಾಡುತ್ತಿಲ್ಲ ಅಥವಾ ಮಕ್ಕಳಿಗೆ ಚಿಕಿತ್ಸೆ ನೀಡಲು ಇತರೆ ಸೌಕರ್ಯಗಳನ್ನು ಬಳಸುತ್ತಿಲ್ಲ. ಯಾವುದೇ ಬಗೆಯ ಚಿಕಿತ್ಸೆಯನ್ನೂ ನೀಡುತ್ತಿಲ್ಲ. ಹಾಗಾಗಿ, ಆಸ್ಪತ್ರೆ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ನೀಡಿರುವ ನೋಟಿಸ್ ಊರ್ಜಿತವಲ್ಲ ಎಂದು ಪೀಠ ಹೇಳಿದೆ.
ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಕಟ್ಟಡವನ್ನು ಪರಿಶೀಲಿಸಿ ವಸ್ತು ಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿತ್ತು. ಬಿಬಿಎಂಪಿ ಸಲ್ಲಿಸಿದ್ದ ವರದಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠ, ಆ ಕಟ್ಟಡವನ್ನು ಕೇವಲ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುವ ಮಕ್ಕಳು ಹಾಗೂ ಅವರ ಪೋಷಕರ ವಾಸ್ತವ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಅಲ್ಲಿ ಯಾವುದೇ ಸಾಧನಗಳಿಲ್ಲ, ಚಿಕಿತ್ಸೆಯನ್ನೂ ಸಹ ನೀಡುತ್ತಿಲ್ಲ. ಹಾಗಾಗಿ, ಬಿಬಿಎಂಪಿ ನೀಡಿರುವ ನೋಟಿಸ್ ಸಿಂಧುವಲ್ಲ ಎಂದಿದೆ.