ಬೆಂಗಳೂರು:ಸಿಎಂ ಕುಮಾರಸ್ವಾಮಿ ಅವರು ಎರಡನೇ ಪತ್ನಿ ಹೊಂದಿದ್ದು, ಆ ಸಂಗತಿಯನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ನಮೂದಿಸಿಲ್ಲ ಎಂದು ಆರೋಪಿಸಿರುವ ಅರ್ಜಿದಾರರಿಗೆ ಸಿಎಂ ಅವರು ಎರಡನೇ ಪತ್ನಿ ಹೊಂದಿರುವ ದಾಖಲೆ ಸಲ್ಲಿಸುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿದೆ.
ಪ್ರಜ್ಞಾವಂತ ನಾಗರಿಕ ಸಮಿತಿಯ ಅಧ್ಯಕ್ಷ ಆನಂದ್ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡನೇ ಪತ್ನಿಯನ್ನ ಹೊಂದಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ವಿವರ ನೀಡಿಲ್ಲ ಎಂದು ಆರೋಪಿಸಿದ್ದರು.
2018ರ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ತಮ್ಮ ಕುಟುಂಬದ ಮಾಹಿತಿ ಹಾಗೂ ಆಸ್ತಿ ಪಾಸ್ತಿಗಳ ವಿವರ ಸಲ್ಲಿಸಿದ್ದಾರೆ. ಇದನ್ನ ಕೆಂದ್ರ ಚುನಾವಣಾ ಆಯೋಗ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಸಹ ಮಾಡಿದೆ. ಆಯೋಗಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಕುಮಾರಸ್ವಾಮಿಯವರು ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಹಾಗೂ ಮಗಳು ಶಮೀಕಾ ಕುಮಾರಸ್ವಾಮಿ ಬಗ್ಗೆ ಯಾವುದೇ ಉಲ್ಲೇಖ ಮಾಡಿರುವುದಿಲ್ಲ. ಈ ಸಂಗತಿಯನ್ನ ಮರೆಮಾಚಿದ್ದಾರೆ. ಹೀಗಾಗಿ ಜನಪ್ರಿನಿಧಿಗಳ ಕಾಯ್ದೆ 125A ಐಪಿಸಿ 181ರ ಅಡಿ ಕ್ರಮ ತೆಗೆದುಕೊಳ್ಳುವಂತೆ ಆನಂದ್ ಮನವಿ ಮಾಡಿದ್ದರು. ಅಲ್ಲದೇ ಈ ಪ್ರಕರಣದ ತನಿಖೆಗೆ ಸೂಕ್ತ ತನಿಖಾ ಸಂಸ್ಥೆಗೆ ವಹಿಸುವಂತೆಯೂ ಕೋರಿತ್ತು.
ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಮೂರ್ತಿ ರಾಮಚಂದ್ರ ಹುದ್ದಾರ್, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಲಭ್ಯವಿರುವ ಕುಮಾರಸ್ವಾಮಿಯ ಆಸ್ತಿಪಾಸ್ತಿ ವಿವರದ ಪ್ರಮಾಣ ಪತ್ರವನ್ನ ಸಾಕ್ಷಿಯನ್ನಾಗಿ ಪರಿಗಣಿಸಲು ನಿರಾಕರಿಸಿದರು. ಜೊತೆಗೆ ಕುಮಾರಸ್ವಾಮಿಯವರಿಗೆ ಎರಡನೇ ಪತ್ನಿ ಇರುವ ಆರೋಪ ಕುರಿತು ಸೂಕ್ತ ದಾಖಲೆಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನ ಜುಲೈ 12ಕ್ಕೆ ಮುಂದೂಡಿಕೆ ಮಾಡಿದರು.