ಬೆಂಗಳೂರು:ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಧರ್ಮದ ಆಧಾರದಲ್ಲಿ ಜನರನ್ನ ಒಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಕಿಡಿಕಾರಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಕ್ಕೆ ಅಂಟಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ. ಇದೇ ಡಿ.28 ರಂದು ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸಿ, ಈ ಕುರಿತು ಜನ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತೇವೆ. ಇಂದು ವಿವಿಗಳ ಒಳಗೆ ಪೊಲೀಸರು ನುಗ್ಗಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದರ ಜೊತೆ ಪ್ರತಿಪಕ್ಷಗಳ ದನಿ ಅಡಗಿಸುತ್ತಿದ್ದಾರೆ. ಇದೆಲ್ಲದರ ವಿರುದ್ಧ ಅಂದು ಪ್ರತಿಭಟನೆ ನಡೆಸುತ್ತೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ.. ಅಷ್ಟೇ ಅಲ್ಲ, ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಆಗಿದ್ದು ಏನು? ನೊಂದ ಮಹಿಳೆಗೆ ಯಾವ ನ್ಯಾಯ ಸಿಕ್ಕಿತು. ಸಂತ್ರಸ್ತೆ ದುರ್ಮರಣಕ್ಕೊಳಗಾಗಬೇಕಾಯ್ತು. ಅವರ ತಂದೆ ಲಾಕಪ್ನಲ್ಲಿ ಸಾವನ್ನಪ್ಪಬೇಕಾಯ್ತು. ಇದರ ಹಿಂದೆ ಇದ್ದವರು ಬಿಜೆಪಿ ನಾಯಕರೇ.. ಯಾಕೆ ಇವರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಧರಣಿ ನಡೆಸುತ್ತೇವೆ ಎಂದು ವಿವರಿಸಿದರು.
ಮಹದಾಯಿ ಯೋಜನೆಗೆ ಕೇಂದ್ರದ ತಡೆ ವಿಚಾರ ಮಾತನಾಡಿ, ಕೇಂದ್ರ ಸ್ವಾರ್ಥ ರಾಜಕಾರಣ ಮಾಡುತ್ತಿದೆ. ಚುನಾವಣೆ ಇದ್ದಾಗ ಒಂದು, ಇಲ್ಲದಾಗ ಮತ್ತೊಂದು. ಸಮಯಕ್ಕೆ ಸರಿಯಾಗಿ ಕಥೆ ಹೆಣೆಯುತ್ತದೆ. ಇಂತಹವರನ್ನ ಸೃಷ್ಟಿಸೋದ್ರಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ನಿಸ್ಸೀಮರು ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಉಗ್ರಪ್ಪ, ಎಂಎಲ್ಸಿ ಪ್ರಕಾಶ್ ರಾಥೋಡ್, ಶಾಸಕ ಆನಂದ ನ್ಯಾಮಾಗೌಡ ಮತ್ತಿತರರು ಉಪಸ್ಥಿತರಿದ್ದರು.