ಬೆಂಗಳೂರು: ಸಂಸತ್ತಿನ ಭದ್ರತಾ ಲೋಪ ಆಘಾತಕಾರಿ ಘಟನೆ. ದಾಳಿ ನಡೆಸಿದ ಯುವಕರಿಗೆ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿರುವುದು ಅತ್ಯಂತ ಕಳವಳಕಾರಿ ವಿಚಾರ. ಒಬ್ಬ ವಿದ್ಯಾವಂತ ಸಂಸದನಾಗಿ ಅಪರಿಚಿತರಿಗೆ ಪಾಸುಗಳನ್ನು ನೀಡಲು ಹೇಗೆ ಸಾಧ್ಯ? ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆದ ಅನಾಹುತ ಕೂಡಾ ಶಿಕ್ಷಾರ್ಹ. ತಕ್ಷಣ ಪ್ರತಾಪ್ ಸಿಂಹ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಉಚ್ಚಾಟನೆ ಮಾಡಬೇಕು. ಸಂಸತ್‌ಗೆ ರಕ್ಷಣೆ ನೀಡಲಾಗದ ಗೃಹ ಸಚಿವ ಅಮಿತ್ ಶಾ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಪ್ ಒತ್ತಾಯಿಸಿತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಸತ್ತಿನ ಭದ್ರತಾ ಲೋಪ ಪ್ರಕರಣವನ್ನು ಖಂಡಿಸಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ನೇತೃತ್ವದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋಹನ್ ದಾಸರಿ, ಹೊಸ ಸಂಸತ್ತು ಉದ್ಘಾಟನೆಗೊಂಡ ನಂತರ ನಡೆದಿರುವ ಎರಡನೇ ಭದ್ರತಾ ಲೋಪ ಇದಾಗಿದೆ. 22 ವರ್ಷಗಳ ಹಿಂದಿನ ಭಯೋತ್ಪಾದಕರ ದಾಳಿ ದಿನವನ್ನೇ ಆರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ, ಈ ಘಟನೆ ಹಿಂದೆ ಬೇರೆ ಹುನ್ನಾರಗಳಿರಬಹುದು. ಇದು ದೇಶದ ಸುರಕ್ಷತೆಯ ದೃಷ್ಟಿಯಿಂದ ಹಲವು ಪ್ರಶ್ನೆಗಳನ್ನು ಸೃಷ್ಟಿಸಿವೆ. ಮೈಸೂರಿನ ಮೂಲದ ಮನೋರಂಜನ್ಗೆ ಈ ಮೊದಲು ಪ್ರತಾಪ್ ಸಿಂಹ ಅವರೇ ಎರಡು ಬಾರಿ ಪಾಸ್ ನೀಡಿದ್ದರು ಎನ್ನಲಾಗುತ್ತಿದೆ. ಸಂಸತ್ ಸಭಾಂಗಣ ಪ್ರವೇಶಿಸಲು ಪಾಸ್ ಸ್ವೀಕರಿಸಿದ ವ್ಯಕ್ತಿ ನಡೆಸುವ ಎಲ್ಲ ಕೃತ್ಯಗಳಿಗೆ ಪಾಸ್ ಕೊಟ್ಟ ಸಂಸದರೇ ಜವಾಬ್ದಾರರಾಗಿರುತ್ತಾರೆ. ಪರಿಚಿತರಿಗಷ್ಟೇ ಪಾಸ್ ನೀಡಬೇಕು ಎಂಬ ನಿಯಮವಿದೆ. ಇದೆಲ್ಲವೂ ಪಾಸ್‌ನಲ್ಲಿ ಉಲ್ಲೇಖವಾಗಿರುತ್ತದೆ. ಹಾಗಾಗಿ ಪ್ರತಾಪ್ ಸಿಂಹ ಅವರನ್ನು ಉಚ್ಚಾಟಿಸಿ, ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಸಂಸತ್ತಿಗೆ ರಕ್ಷಣೆ ನೀಡಲಾಗದವರು, ಪ್ರಶ್ನಿಸಿದ ಸಂಸದರನ್ನು ಅಮಾನತುಗೊಳಿಸಿ ಪೌರುಷ ಮೆರೆಯುತ್ತಿದ್ದಾರೆ. ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಆದರೆ, ಈ ಭದ್ರತಾ ವೈಫಲ್ಯಕ್ಕೆ ಮೂಲ ಸಂಸದ ಪ್ರತಾಪ್ ಸಿಂಹ. ಅವರು ಪಾಸ್ ನೀಡಿದ್ದರಿಂದಲೇ ಈ ಎಲ್ಲ ಅನಾಹುತಗಳಿಗೆ ಕಾರಣ. ಸಂಸದರನ್ನು ಅಮಾನತುಗೊಳಿಸಿ ವಿಚಾರಣೆಗೆ ಒಳಪಡಿಸುವ ಬದಲು ಭದ್ರತಾ ವೈಫಲ್ಯದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ ಸಂಸದರನ್ನೇ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ವ್ಯಕ್ತಪಡಿಸಿದರು.