ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಕೃತ್ಯ ಎಸಗದಂತೆ ಕಾರ್ಯಕರ್ತರಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.
ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ ನಡೆಯಿತು. ಪ್ರತಿಭಟನೆ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಈಗಾಗಲೇ ಕರೆ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐಟಿ, ಇಡಿ ದುರ್ಬಳಕೆ ಮಾಡಲಾಗುತ್ತಿದೆ. ದೆಹಲಿಯ ಸುನೀಲ್ ಶರ್ಮಾ ಅವರ ನಿವಾಸದಲ್ಲಿ ದೊರೆತ ಹಣ ನಮ್ಮದೇ ಅಂತಾ ಸುನೀಲ್ ಶರ್ಮ ಈಗಾಗಲೇ ಹೇಳಿದ್ದಾರೆ. ಆದ್ರೂ ಕೂಡ ಅದು ಡಿಕೆಶಿ ಹಣ ಅಂತಾ ಇಡಿ ಒತ್ತಡ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಕೆಶಿ ಬಂಧನ ಖಂಡಿಸಿ ನಾಳೆ ಪ್ರತಿಭಟನೆ ಪ್ರತಿಪಕ್ಷಗಳನ್ನ ಮುಗಿಸುವ ಕೆಲಸ ನಡೆಯುತ್ತಿದೆ. ಐಟಿ, ಇಡಿ, ಸಿಬಿಐ ಎಲ್ಲವೂ ಅವರ ಸುಪರ್ದಿಯಲ್ಲಿವೆ. ಐಟಿ, ಇಡಿಯವರು ಅವರ ಕೆಲಸ ಅವರು ಮಾಡಲಿ. ಅದನ್ನ ಬಿಟ್ಟು ಬಿಜೆಪಿ ನಿರ್ದೇಶನದಂತೆ ಮಾಡಿದರೆ ಸರಿಯಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದುರುದ್ದೇಶಪೂರಿತವಾಗಿ ಕಿರುಕುಳ ಕೊಡುತ್ತಿದ್ದಾರೆ. ಇದನ್ನ ವಿರೋಧಿಸಿ ನಾಳೆ ಪ್ರತಿಭಟನೆ ನಡೆಸುತ್ತೇವೆ. ಇಂದು ನಮ್ಮ ಮುಖಂಡರ ಸಭೆ ನಡೆಸಿದ್ದೇವೆ. ನ್ಯಾಷನಲ್ ಕಾಲೇಜಿನಿಂದ ಫ್ರೀಡಂಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ನಷ್ಟವಾಗಿದೆ. ಜನರು ಅನ್ನ, ನೀರಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಪೈಸೆ ಹಣ ನೀಡಿಲ್ಲ. ಅವರು ಕೊಡೋದು ಅವರ ದುಡಿಮೆ ಹಣವನ್ನೇನಲ್ಲ. ನಾವು ತೆರಿಗೆ ಕಟ್ಟಿದ ಅನುದಾನವನ್ನೇ ನೀಡೋದು. ಅದಕ್ಕೂ ವಿಳಂಬ ಮಾಡಿದರೆ ಹೇಗೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದರು.