ಬೆಂಗಳೂರು: ಅಂಜನಾಪುರ ಬಿಡಿಎ ಬಡಾವಣೆ ರಸ್ತೆ ಗುಂಡಿ ಬಿದ್ದಿದೆ. ಶೀಘ್ರವೇ ದುರಸ್ತಿ ಮಾಡುವಂತೆ ಇಲ್ಲಿನ ನಿವಾಸಿಗಳು ವಿನೂತನ ಪ್ರತಿಭಟನೆ ಮೂಲಕ ಪಟ್ಟು ಹಿಡಿದಿದ್ದಾರೆ. ಮಳೆ ಬಂದ್ರೆ ಸಾಕು ನಗರದ ರಸ್ತೆಗಳು ಮಳೆಯ ರಭಸಕ್ಕೆ ಹಾಗೂ ಕಳಪೆ ಕಾಮಗಾರಿಯಿಂದಾಗಿ ಬಿರುಕು ಬಿಟ್ಟು ಗುಂಡಿ ಬೀಳುತ್ತವೆ. ಕೊರೊನಾ ಬರೋದಕ್ಕೂ ಮೊದಲು ರಸ್ತೆಗಳ ಗುಂಡಿ ಮುಚ್ಚಲು ಅಭಿಯಾನಗಳನ್ನ ಮಾಡಲಾಗುತ್ತಿತ್ತು.
ಆದ್ರೆ, ಕಳೆದ ಕೊರೊನಾ ಲಾಕ್‌ಡೌನ್ ಹಿನ್ನೆಲೆ ಜನ ವರ್ಕ್ ಫ್ರಮ್ ಹೋಮ್ ಮಾಡಿದ್ದಾರೆ. ಈಗೀಗ ಕೆಲ ಕಂಪನಿಗಳು ಉದ್ಯೋಗಿಗಳಿಗೆ ಕಚೇರಿಗೆ ಬಂದು ಕೆಲಸ ಮಾಡಲು ಅವಕಾಶ ನೀಡಿವೆ. ಆದ್ರೆ, ಇಷ್ಟು ದಿನಗಳ ನಂತರ ರಸ್ತೆಗೆ ಬಂದ ಜನ ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಚಲಾಯಿಸಲು ಹೋಗಿ ಹೈರಾಣಾಗಿದ್ದಾರೆ. ಆಕ್ರೋಶಗೊಂಡ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಿದ್ದಾರೆ.
ರಸ್ತೆಯಲ್ಲಿ ಭತ್ತ ನಾಟಿ :ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದು ನಿರ್ಮಾಣವಾಗಿರುವ ಹೊಂಡದಲ್ಲಿ ತುಂಬಿದ ಕೆಂಪನೆ ನೀರಿನಲ್ಲಿ ತೆಪ್ಪದಲ್ಲಿ ಕುಳಿತು ವಾಯುವಿಹಾರಕ್ಕೆ ಮುಂದಾಗಿದ್ದಾರೆ. ಮಹಿಳೆಯರು, ಪುರುಷರು, ಮಕ್ಕಳು, ಎಲ್ಲಾ ಸೇರಿ ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಭತ್ತದ ಪೈರನ್ನ ನಾಟಿ ಮಾಡುತ್ತಿದ್ದಾರೆ.
ರಸ್ತೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ ದುರಸ್ತಿಗೆ ಆಗ್ರಹಿಸಿ ವಿನೂತನ ಪ್ರತಿಭಟನೆ :ಅಂಜನಾಪುರ ಬಿಡಿಎ ಬಡಾವಣೆ ನಿರ್ಮಾಣವಾಗಿ 18 ವರ್ಷಗಳೇ ಕಳೆದಿವೆ. ಕನಕಪುರ ಹಾಗೂ ಬನ್ನೇರುಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ಆಂಜನಾಪುರ ಮುಖ್ಯ ರಸ್ತೆ ಕಳೆದ 12 ವರ್ಷಗಳಿಂದ ನಿರ್ವಹಣೆ ಇಲ್ಲದೆ, ದುರಸ್ತಿ ಇಲ್ಲದೆ ಇಲ್ಲಿನ ನಿವಾಸಿಗಳು ನಿತ್ಯ ಪರದಾಡುವಂತಾಗಿದೆ. ಈ ಬಗ್ಗೆ ಎಷ್ಟೇ ಮನವಿ ಕೊಟ್ಟರೂ ಸಮಸ್ಯೆ ಬಗೆಹರಿಯದ ಹಿನ್ನೆಲೆ ಇಲ್ಲಿನ'ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ ಅಸೋಸಿಯೇಷನ್' ಸದಸ್ಯರೆಲ್ಲ ಸೇರಿ ಈ ರೀತಿಯ ವಿನೂತನ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶವನ್ನ ಹೊರ ಹಾಕಿದ್ರು.
ರಸ್ತೆ ದುರಸ್ತಿ ಭರವಸೆ ನೀಡಿದ ಶಾಸಕ :ಸ್ಥಳಕ್ಕೆ ಇಲ್ಲಿನ ಶಾಸಕ ಎಂ. ಕೃಷ್ಣಪ್ಪ ಬರಬೇಕು ಕೂಡಲೇ ರಸ್ತೆ ದುರಸ್ತಿ ಕಾರ್ಯ ಆರಂಭ ಮಾಡಬೇಕು ಅಂತಾ ಪ್ರತಿಭಟನಾನಿರತರು ಪಟ್ಟು ಹಿಡಿದ್ರು. ಸ್ಥಳಕ್ಕೆ ಬಂದ ಶಾಸಕ ಕೃಷ್ಣಪ್ಪ, ಈ ರಸ್ತೆ ದುರಸ್ತಿ ಹಾಗೂ ಬಡಾವಣೆ ಮೂಲಸೌಕರ್ಯ ವಿಚಾರವಾಗಿ ನಾನು ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೀನೆ. ಮೊನ್ನೆಯಷ್ಟೇ ಬಿಡಿಎ ಚೇರ್ಮನ್ ಹಾಗೂ ಕಮಿಷನರ್ ಅವರನ್ನು ಭೇಟಿ ಮಾಡಿದ್ದೇನೆ. ಟೆಂಡರ್ ಕರೆದು ಕೆಲಸ ಆರಂಭ ಮಾಡುವುದಾಗಿ ಹೇಳಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿಯಲು ಬಹಳಷ್ಟು ದಿನ ಬೇಕಾಗುತ್ತೆ. ಮುಂದಿನ ಬುಧವಾರದಿಂದಲೇ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ವಾಹನಗಳ ಓಡಾಟಕ್ಕೆ ಅನುವು ಮಾಡಿ ಕೊಟ್ಟು, ಇನ್ನೆರಡು ತಿಂಗಳ ಒಳಗಾಗಿ ರಸ್ತೆ ದುರಸ್ತಿ ಕೆಲಸ ಮುಗಿಸುವ ಭರವಸೆಯನ್ನು ಶಾಸಕ ನೀಡಿದ್ದಾರೆ.
ರಸ್ತೆ ಬಂದ್ ಮಾಡುವ ಎಚ್ಚರಿಕೆ :ಶಾಸಕರ ಭರವಸೆ ಹಿನ್ನೆಲೆ ಪ್ರತಿಭಟನಾನಿರತ ನಿವಾಸಿಗಳು ತಾವು ತಂದಿದ್ದ ತೆಪ್ಪವನ್ನ ರಸ್ತೆಯಿಂದ ಹೊರತೆಗೆದು, ಕೆಲಸ ಆರಂಭವಾಗದೆ ಇದ್ರೆ, ಮುಂದಿನ ಶನಿವಾರ ರಸ್ತೆಯನ್ನೇ ಬಂದ್ ಮಾಡುತ್ತೇವೆ ಎಂಬ ಎಚ್ಚರಿಕೆಯೊಂದಿಗೆ ತಮ್ಮ ನಿವಾಸಗಳತ್ತ ತೆರಳಿದ್ರು.