ಬೆಂಗಳೂರು:ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಎಲ್.ಕೆ.ಜಿ, ಯು.ಕೆ.ಜಿ ಕೇಂದ್ರ ತೆರೆಯುವ ಬದಲು ಅಂಗನವಾಡಿ ಕೇಂದ್ರಗಳಲ್ಲೇ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಬೇಕೆಂದು ಎಐಟಿಯುಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ.
ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ, ಯುಕೆಜಿ ಆರಂಭಕ್ಕೆ ವಿರೋಧ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ನೇತೃತ್ವದಲ್ಲಿ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಜಯಮ್ಮ, 2019 ರಿಂದ ಇದೇ ವಿಚಾರವಾಗಿ ಪ್ರತಿಭಟನೆ ನಡೆಸಿ, ಅಹೋರಾತ್ರಿ ಧರಣಿ ನಡೆಸಿದರೂ ಸಚಿವೆ ಶಶಿಕಲಾ ಜೊಲ್ಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈವರೆಗೂ ಕರೆದು ಸಂಘಟನೆ ಜೊತೆ ಚರ್ಚೆ ನಡೆಸಿಲ್ಲ. ಕೇವಲ ಮೊಟ್ಟೆ ಟೆಂಡರ್ ಪಠ್ಯಪುಸ್ತಕ, ಆಟಿಕೆ ಟೆಂಡರ್ ಮಾಡುತ್ತಾ ಲಾಭ ಮಾಡುವ ಯೋಚನೆಯಲ್ಲಿದ್ದಾರೆಯೇ ಹೊರತು ಅಂಗನವಾಡಿ ಉಳಿಸುವ ಬಗ್ಗೆ ಯೋಚಿಸಿಲ್ಲ ಎಂದು ಆರೋಪಿಸಿದರು.
ಶಿಕ್ಷಣ ಇಲಾಖೆ ಈಗಾಗಲೇ 200ಕ್ಕೂ ಹೆಚ್ಚು ಶಾಲೆಗಳಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಆರಂಭಿಸಲು ಮುಂದಾಗಿದೆ. 3-6 ವರ್ಷದ ಮಕ್ಕಳು ಅಂಗನವಾಡಿಯಿಂದಲೇ ಸರ್ಕಾರಿ ಶಾಲೆಗಳ ಎಲ್.ಕೆ.ಜಿ, ಯು.ಕೆ.ಜಿಗೆ ಹೋಗುತ್ತಾರೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. 2016ರಿಂದಲೇ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಬೇಕು ಎಂಬ ಕಾನೂನಿದೆ. ಆದರೂ ರಾಜ್ಯ ಸರ್ಕಾರ ತಪ್ಪು ಹೆಜ್ಜೆ ಇಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕೊಟ್ಟು, ಮಕ್ಕಳಿಗೆ ಮೂಲಸೌಕರ್ಯ ಒದಗಿಸುವಂತೆ 2019ರಿಂದಲೇ ಹೋರಾಟ ಮಾಡಿದರೂ, ಈ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಅಂಗನವಾಡಿಗಳ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ. ಬೇಡಿಕೆಗೆ ಸ್ಪಂದಿಸದಿದ್ದರೆ, ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.