ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರ ಸಂಘದ ರೈತರಿಂದ ನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಆಹೋ ರಾತ್ರಿ ಧರಣಿ ನಿರತರು ನಾವು ಅನ್ನದಾತರು ಭಿಕ್ಷುಕರಲ್ಲ ಎಂದು ಭಿಕ್ಷಾ ತಟ್ಟೆ ಹಿಡಿದು ಅಣಕು ಚಳವಳಿ ನಡೆಸಿದರು.
ಕಬ್ಬು ಎಫ್ಆರ್ಪಿ ದರ ಎರಿಕೆ, ಕಬ್ಬಿನಿಂದ ಬರುವ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಬೇಕು. ಹೆಚ್ಚುವರಿ ದರ ನಿಗದಿ ಬಗ್ಗೆ ರಾಜ್ಯ ಸರ್ಕಾರ ನಾಲ್ಕಾರು ಸಭೆಗಳನ್ನು ನಡೆಸಿ, ತಜ್ಞರ ಸಮಿತಿ ರಚಿಸಿ 5 ದಿನದಲ್ಲಿ ವರದಿ ಪಡೆದು ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ರೈತರಿಗೆ ನ್ಯಾಯ ನೀಡುವುದಾಗಿ ಭರವಸೆ ನೀಡಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಹೋರಾಟ ಹಮ್ಮಿಕೊಳ್ಳಲಾಗಿದೆ.
ರೈತರ ಬದುಕು ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ಎಂದು ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರತಿಭಟನೆ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು 7.50 ಕೋಟಿ ಟನ್ ಕಬ್ಬು ಬೆಳೆದು 78 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿದ್ದಾರೆ. ಕಬ್ಬು ಬೆಳೆದ ರೈತರು ಭಿಕ್ಷುಕರಾಗುತ್ತಿದ್ದಾರೆ. ರೈತರ ಮತ ಭಿಕ್ಷೆ ಬೇಡುವ ಸರ್ಕಾರ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ವರ್ಷದಲ್ಲಿ 30,000 ಕೋಟಿ ವಹಿವಾಟಿನಲ್ಲಿ ರಾಜ್ಯ ಸರ್ಕಾರಕ್ಕೆ 5000 ಕೋಟಿ ತೆರಿಗೆ ಬರುತ್ತಿದೆ. ಆದರೂ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದರು.
ಕಬ್ಬು ಬೆಳೆಗಾರರಿಂದ ನಿರಂತರ ಹೋರಾಟ:ಕಬ್ಬು ಬೆಳೆಗಾರರು ನಿರಂತರ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೇ ಪೊಲೀಸರ ಬಲದಿಂದ ಭಂಡತನ ತೋರುತ್ತಿದೆ. ಕರ್ನಾಟಕ ರಾಜ್ಯಕ್ಕಿಂತ ಕಡಿಮೆ ಸಕ್ಕರೆ ಇಳುವರಿ ಬರುವ ಪಂಜಾಬ್ ರಾಜ್ಯದಲ್ಲಿ, ಉತ್ತರ ಪ್ರದೇಶದಲ್ಲಿ 3,800 ರೂಪಾಯಿ, ಮಹಾರಾಷ್ಟ್ರದಲ್ಲಿ 3,500 ರೂಪಾಯಿ, ಗುಜರಾತ್ ನಲ್ಲಿ 3,200 ರೂಪಾಯಿ ಮತ್ತು ತಮಿಳುನಾಡಿನಲ್ಲಿ 4,400 ರೂಪಾಯಿ ಕಬ್ಬು ಸಾಗಣೆ ವೆಚ್ಚವನ್ನು ಕಾರ್ಖಾನೆಗಳೇ ಭರಿಸುವ ನಿಯಮ ಜಾರಿಯಲ್ಲಿದೆ.