ಬೆಂಗಳೂರು:ನಿವೇಶನದ ಕಾಂಪೌಂಡ್ ಕೆಡವಿ, ನಿರ್ಮಾಣ ಸಾಮಗ್ರಿ ಕದ್ದೊಯ್ದಿರುವ ಆರೋಪದಡಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಸೇರಿದಂತೆ ಮೂವರ ವಿರುದ್ಧ ಕಳ್ಳತನದ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರ ದಯಾನಂದ್ ಕುಮಾರ್ ಎಂಬವರು ನೀಡಿದ ದೂರಿನ ಮೇರೆಗೆ ಸತೀಶ್, ಚಂದ್ರಪ್ಪ ಹಾಗೂ ತಮ್ಮೇಶ್ ಗೌಡ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಇಂದು ಅಮೃತಹಳ್ಳಿ ಪೊಲೀಸ್ ಠಾಣೆ ಬಳಿಕ ತಮ್ಮೇಶ್ ಗೌಡ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ ನಿವೇಶನ ಹೊಂದಿದ್ದ ಅಶ್ವಿನ್ ಎಂಬವರು ಅದಕ್ಕೆ ಕಾಂಪೌಂಡ್ ಹಾಕುವ ಕೆಲಸವನ್ನು ದಯಾನಂದ್ಗೆ ವಹಿಸಿದ್ದರು. ಅದರಂತೆ ಡಿಸೆಂಬರ್ 18ರಂದು ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾಗ ಮಧ್ಯಾಹ್ನ 12 ಗಂಟೆಗೆ ನಿವೇಶನದ ಬಳಿ ಬಂದಿದ್ದ ಸತೀಶ್ ಹಾಗೂ ಚಂದ್ರಪ್ಪ 'ಇದು ತಮಗೆ ಸೇರಿರುವ ಸೈಟ್, ಇಲ್ಲಿ ಕಾಂಪೌಂಡ್ ಹಾಕುವಂತಿಲ್ಲ' ಎಂದಿದ್ದರು.
ಈ ವೇಳೆ 'ಮಾಲೀಕ ಅಶ್ವಿನ್ ಜೊತೆ ಮಾತನಾಡಿ' ಎಂದಿದ್ದ ದಯಾನಂದ್, ತಮ್ಮ ಕೆಲಸ ಮುಂದುವರಿಸಿದ್ದರು. ಇದೇ ಸಂದರ್ಭದಲ್ಲಿ 'ತಮ್ಮೇಶ್ ಗೌಡರವರ ಮನೆಗೆ ಬರುವಂತೆ' ಸತೀಶ್ ತಿಳಿಸಿದಾಗ ದಯಾನಂದ್ ನಿರಾಕರಿಸಿದ್ದರು. ಬಳಿಕ ಕರೆ ಮಾಡಿ ಮಾತನಾಡಿದ್ದ ತಮ್ಮೇಶ್ ಗೌಡ, 'ನಾನು ಕರೆದರೆ ಬರುವುದಿಲ್ಲವಾ? ಆಯ್ತು, ಕಾಂಪೌಂಡ್ ಕೆಲಸವನ್ನು ನಿಲ್ಲಿಸಿ ವಾಪಸ್ ಹೋಗು. ಇಲ್ಲವಾದರೆ ಕಾಂಪೌಂಡ್ ಇಲ್ಲದಂತೆ ಮಾಡುತ್ತೇನೆ' ಎಂದು ಧಮ್ಕಿ ಹಾಕಿದ್ದರು ಎಂದು ಆರೋಪಿಸಲಾಗಿದೆ. ಇಷ್ಟಾದ ಬಳಿಕ ಈ ವಿಚಾರವನ್ನು ದಯಾನಂದ್, ನಿವೇಶನದ ಮಾಲೀಕ ಅಶ್ವಿನ್ಗೆ ತಿಳಿಸಿ ಅವರ ಸೂಚನೆಯಂತೆ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತೆರಳಿದ್ದರು.
ಆದರೆ ಡಿಸಂಬರ್ 19ರಂದು ಬಂದು ನೋಡಿದಾಗ ರಾತ್ರೋರಾತ್ರಿ ಕಾಂಪೌಂಡ್ ಕೆಡವಿ, ಅಲ್ಲಿರಿಸಲಾಗಿದ್ದ ನಿರ್ಮಾಣ ಸಾಮಗ್ರಿಗಳನ್ನು ಕದ್ದೊಯ್ಯಲಾಗಿದೆ ಎಂದು ದಯಾನಂದ್ ಕುಮಾರ್ ದೂರು ನೀಡಿದ್ದಾರೆ. ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿರುವ ಅಮೃತಹಳ್ಳಿ ಠಾಣಾ ಪೊಲೀಸರು ಪ್ರಕರಣದಲ್ಲಿ ತಮ್ಮೇಶ್ ಗೌಡರನ್ನು ಮೂರನೇ ಆರೋಪಿಯನ್ನಾಗಿ ಉಲ್ಲೇಖಿಸಿದ್ದಾರೆ. ಪೊಲೀಸರ ಕ್ರಮ ಖಂಡಿಸಿ ತಮ್ಮೇಶ್ ಗೌಡ ಮತ್ತು ಅವರ ಬೆಂಬಲಿಗರು ಠಾಣೆ ಮುಂದೆ ಜಮಾಯಿಸಿ ಕೆಲಕಾಲ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಳ: ಪ್ರತಿಪಕ್ಷ ನಾಯಕ ಆರ್.ಅಶೋಕ್