ಬೆಂಗಳೂರು: ಕೋರ್ಟ್ ತೀರ್ಪು ಅವರ ಪರ ಬಂದರೆ ನ್ಯಾಯಾಂಗದ ಜಯ ಎನ್ನುತ್ತಾರೆ.. ಅದೇ ವಿರುದ್ಧ ಬಂದರೆ ಬೀದಿಗಿಳಿದು ಹೋರಾಟ ಮಾಡುತ್ತಾರೆ. ಬೀದಿಯಲ್ಲಿ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ತೀರ್ಪು ಬದಲಾಗುತ್ತಾ..? ನಿಮ್ಮಲ್ಲಿ ಘಟಾನುಘಟಿ ವಕೀಲರು ಇದ್ದಾರೆ. ನಿಮಗೆ ತೀರ್ಪು ಸರಿಯಾಗಿಲ್ಲ ಅಂದರೆ ಹೈಯರ್ ಕೋರ್ಟ್ ಇದೆ. ಅಲ್ಲಿಗೆ ಹೋಗಿ ಎಂದು ರಾಹುಲ್ ಗಾಂಧಿ ಪ್ರಕರಣದಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ನಡೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಿಡಿಕಾರಿದ್ದಾರೆ.
ಅಧಿಕೃತ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದ ರಾಹುಲ್ ಗಾಂಧಿ ಅವರಿಗೆ ಸಾರ್ವಜನಿಕವಾಗಿ ಯಾವ ಸ್ಟೇಟ್ಮೆಂಟ್ ಕೊಡಬೇಕು ಎನ್ನುವ ವಿಚಾರ ಗೊತ್ತಿಲ್ಲದೇ ಕೋಲಾರದಲ್ಲಿ 2019ರಲ್ಲಿ ಮಾಡಿದ ಭಾಷಣಕ್ಕೆ ಸೂರತ್ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಆದೇಶ ಮೇಲೆ ಸಂಸದ ಸ್ಥಾನದಿಂದ ಅನರ್ಹ ಆಗಿದೆ. ಆದರೂ ಕಾಂಗ್ರೆಸ್ ಬೀದಿಗೆ ಇಳಿದಿದೆ ಎಂದು ಟೀಕಿಸಿದರು.
ತಮ್ಮ ಹೇಳಿಕೆಗೆ ಕ್ಷಮೆಯಾಚನೆ ಮಾಡದಿರುವುದಕ್ಕೆ ಜೈಲು ಶಿಕ್ಷೆ ವಿಧಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಎರಡು ವರ್ಷ ಜೈಲು ಶಿಕ್ಷೆ ಆಗಿದ್ದ ಅತನ ಸಂಸದರನ್ನು ಅನರ್ಹ ಮಾಡುವ ಕುರಿತ ನಿರ್ಧಾರ ಬದಲಾವಣೆ ಮಾಡುವ ಪ್ರಸ್ತಾಪವಾದಾಗ ರಾಹುಲ್ ಗಾಂಧಿ ಸಾರ್ವಜನಿಕ ಪ್ರತಿಯನ್ನು ಹರಿದು ಹಾಕಿದ್ದರು. ಆಗ ಇದನ್ನು ಅವರೇ ಅಸಂಬದ್ಧ ಅಂತ ಹೇಳಿದ್ದರು. ನಿಮ್ಮದೇ ಸರ್ಕಾರ ಇದ್ದರೂ ಕೂಡ ಈ ರೀತಿಯ ನಿರ್ಧಾರ ತೆಗೆದುಕೊಂಡಿತು. ಇದೀಗ ಪ್ರತಿಭಟನೆ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ತೀರ್ಪು ಪ್ರತಿಯೊಬ್ಬರಿಗೂ ಎಚ್ಚರಿಕೆ ಪಾಠ:ಬೀದಿಯಲ್ಲಿ ಪ್ರತಿಭಟನೆ ಮಾಡಿದ್ರೆ ನ್ಯಾಯಾಲಯದ ತೀರ್ಪು ಬದಲಾಗುತ್ತಾ..? ನಿಮ್ಮಲ್ಲಿ ಘಟಾನುಘಟಿ ವಕೀಲರು ಇದ್ದಾರೆ. ಈ ತೀರ್ಪು ಪ್ರತಿಯೊಬ್ಬರಿಗೂ ಎಚ್ಚರಿಕೆ ಪಾಠ ಆಗಬೇಕು, ಇದೊಂದೆ ಸಲ ಅಲ್ಲ ಸಾಕಷ್ಟು ಬಾರಿ ರಾಹುಲ್ ಗಾಂಧಿ ಹೇಳಿಕೆ ಕೊಟ್ಟಿದ್ದಾರೆ.
ಈ ಹೇಳಿಕೆಯನ್ನು ಸರಿ ಮಾಡಿಕೊಳ್ಳದೇ ಪುನರಾವರ್ತನೆ ಮಾಡುವುದು ಸರಿಯಲ್ಲ. ನಿಮಗೆ ತೀರ್ಪು ಸರಿಯಾಗಿಲ್ಲ ಅಂದರೆ ಹೈಯರ್ ಕೋರ್ಟ್ ಇದೆ. ಅಲ್ಲಿಗೆ ಹೋಗಬಹುದು,ಕೋರ್ಟ್ ಅವರ ಪರವಾಗಿ ಕೊಟ್ಟರೆ ನ್ಯಾಯಾಂಗದ ಜಯ ಅಂತಾರೆ ಇಲ್ಲದೇ ಇದ್ದರೆ ಹಾದಿ ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಾರೆ ಇದರಿಂದ ತೀರ್ಪು ಬದಲಾವಣೆ ಆಗಲ್ಲ ಎಂದು ಆರೋಪಿಸಿದರು.