ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಆಗ್ರಹಿಸಿ ಜನವರಿ 14ರಿಂದ ಆರಂಭಗೊಂಡಿದ್ದ ಕೂಡಲಸಂಗಮ ಶ್ರೀಗಳ ನೇತೃತ್ವದ ಪಾದಯಾತ್ರೆ ಮುಕ್ತಾಯಗೊಂಡರೂ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸದ ಹಿನ್ನೆಲೆ ವಿಧಾನಸೌಧದ ಎದುರು ಧರಣಿ ನಡೆಸುವ ನಿರ್ಣಯವನ್ನು ಇಂದು ನಡೆದ ಬೃಹತ್ ಸಮಾವೇಶದಲ್ಲಿ ಕೈಗೊಳ್ಳಲಾಯಿತು.
ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ :705 ಕಿ.ಮೀ ಸುದೀರ್ಘ ಪಾದಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ನಗರದ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶವನ್ನು ಇಂದು ನಡೆಸಲಾಯಿತು. ರಾಜ್ಯದ ಮೂಲೆ ಮೂಲೆಯಿಂದ ಪಂಚಮಸಾಲಿ ಸಮುದಾಯದ ಜನಸಾಗರವೇ ಹರಿದು ಬಂದಿತ್ತು. ಪಂಚಮಸಾಲಿ ಪರ ಘೋಷಣೆ ಮುಗಿಲು ಮುಟ್ಟಿತ್ತು.
ಸಿಎಂ ಬಿಎಸ್ವೈ ವಿರುದ್ಧ ಹರಿಹಾಯ್ದ ಯತ್ನಾಳ್ :ಕೂಡಲಸಂಗಮದಲ್ಲಿ ಪಾದಯಾತ್ರೆ ಉದ್ಘಾಟಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇಂದಿನ ಬೃಹತ್ ಸಮಾವೇಶವನ್ನೂ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ಎಲ್ಲವೂ ನಿಮ್ಮ ಕೈಯಲ್ಲಿ ಇದೆ. ಆದರೆ, ನಿಮಗೆ ಮನಸ್ಸಿಲ್ಲ.
ನಿಮ್ಮ ಜಾತಿಗಾದರೆ ತಕ್ಷಣ ಕೊಟ್ಟಿರಿ, ನಮಗೆ ಯಾಕೆ ಕೊಡುತ್ತಿಲ್ಲ?. ಕೇಳಿದರೆ ಪ್ರಾಣ ಕೊಡುತ್ತೇವೆ ಎನ್ನುತ್ತಾರೆ. ನಮಗೆ ಯಾರ ಪ್ರಾಣವೂ ಬೇಕಿಲ್ಲ. 2ಎ ಮೀಸಲಾತಿ ಕೊಡಿ ಸಾಕು. ಇಲ್ಲವೇ ಕೊಡಲು ಸಾಧ್ಯವಿಲ್ಲ ಎಂದು ಹೇಳಿ. ನಮಗೆ ಹೇಗೆ ತೆಗೆದುಕೊಳ್ಳಬೇಕು ಎಂದು ಗೊತ್ತಿದೆ ಎಂದು ಸಿಎಂ ಬಿಎಸ್ವೈ ವಿರುದ್ಧ ಹರಿಹಾಯ್ದರು.
ವಿಧಾನಸೌಧದ ಎದುರು ಧರಣಿ :ನಾವು ಮಾರ್ಚ್ 4ರವರೆಗೆ ವಿಧಾನಸೌಧದ ಎದುರು ಧರಣಿ ಮಾಡುತ್ತೇವೆ. 4ರಂದು ಅಧಿವೇಶನ ಕೂಡ ಆರಂಭವಾಗಲಿದೆ. ಅಲ್ಲಿ ನಾನು ಮತ್ತೆ ಎದ್ದು ನಿಲ್ಲುತ್ತೇನೆ, ಸಿಎಂ ಉತ್ತರ ಕೊಡಲೇಬೇಕು, ಇಲ್ಲದೇ ಇದ್ದಲ್ಲಿ ಸಮುದಾಯದ ಸಚಿವರು ರಾಜೀನಾಮೆ ಕೊಡಬೇಕು. ಈ ಅಧಿವೇಶನ ಮುಗಿಯುವುದರೊಳಗೆ 2ಎ ಘೋಷಣೆ ಮಾಡದೇ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.
ಸಚಿವ ಸಿ ಸಿ ಪಾಟೀಲ್ ಮನವಿ :ನಂತರ ಸರ್ಕಾರದ ಪರ ಸಮಾವೇಶದ ಸ್ಥಳಕ್ಕೆ ತೆರಳಿದ್ದ ಸಚಿವ ಸಿ ಸಿ ಪಾಟೀಲ್, ಸರ್ಕಾರ ನಿಮ್ಮ ಬೇಡಿಕೆ ಬಗ್ಗೆ ಸಕಾರಾತ್ಮಕ ನಿಲುವು ಹೊಂದಿದೆ. ಈಗಾಗಲೇ ಬೇಡಿಕೆ ಕುರಿತು ಅಧ್ಯಯನ ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಿಎಂ ಸೂಚಿಸಿದ್ದಾರೆ.
ಸರ್ಕಾರಕ್ಕೆ ಏನು ಸಂದೇಶ ಕಳುಹಿಸಬೇಕೋ ಅದನ್ನು ವೇದಿಕೆ ಮೂಲಕ ಕಳಿಸಿದ್ದೀರಿ, ಆಶೀರ್ವಚನ ಮುಗಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಎಂದು ಮನವಿ ಮಾಡಿದರು.
2ಎ ಕೊಡಿಸಲು ಶ್ರಮಿಸುತ್ತೇವೆ - ನಿರಾಣಿ :2008ರಲ್ಲಿ ಯಡಿಯೂರಪ್ಪನವರು ಸಿಎಂ ಇದ್ದಾಗ 2ಎ ಮೀಸಲು ಬೇಡಿಕೆ ಬಂದಿತ್ತು. ಆಗ ಸಂಪುಟ ಉಪ ಸಮಿತಿ ರಚಿಸಿದ್ದರು, ಅಂದು ಕಾನೂನು ತೊಡಕು ಬಂದ ಕಾರಣಕ್ಕೆ 3ಬಿಗೆ ಸೇರಿಸಲಾಯಿತು. ಈಗ 2ಎ ಬೇಡಿಕೆ ಕುರಿತು ಅಧ್ಯಯನ ವರದಿಗೆ ಸೂಚಿಸಿದ್ದಾರೆ. 2ಎ ಕೊಡಿಸಲು ನಾವೆಲ್ಲಾ ಶ್ರಮಿಸುತ್ತಿದ್ದೇವೆ. ಸಮಾಧಾನದಿಂದ ಇರಿ, ಸಚಿವರು, ಶಾಸಕರು ಪ್ರಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಸ್ಪಷ್ಟ ನಿರ್ಧಾರಕ್ಕೆ ಆಗ್ರಹ :ಉಭಯ ಸಚಿವರ ಭಾಷಣಕ್ಕೆ ಸಮುದಾಯದ ಜನರಿಂದ ಪದೇಪದೆ ಅಡ್ಡಿಯಾಯಿತು. ಸ್ಪಷ್ಟ ನಿರ್ಧಾರ ಹೇಳಬೇಕು ಎನ್ನುವ ಕೂಗು ಕೇಳಿ ಬಂದಿತು. ಆಯೋಜಕರು ಮಧ್ಯಪ್ರವೇಶಿಸಿ ಜನರನ್ನು ನಿಯಂತ್ರಿಸಬೇಕಾಯಿತು. ಜನರ ಘೋಷಣೆ ನಡುವೆ ಭಾಷಣ ಮುಗಿಸಲು ಸಚಿವರು ಹರಸಾಹಸ ಪಡಬೇಕಾಯಿತು.
ಈ ಸುದ್ದಿಯನ್ನೂ ಓದಿ:ಮೀಸಲಾತಿ ಕೊಡದಿದ್ರೆ, ಹೇಗೆ ಪಡೆಯಬೇಕು ಎನ್ನುವುದು ಗೊತ್ತು: ವಚನಾನಂದ ಶ್ರೀ