ಬೆಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡಲು ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಕೋಗಿಲು ವೆಂಕಟೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ವರದಿ ಜಾರಿಗೆ ಆಗ್ರಹ:ಫ್ರೀಡಂ ಪಾರ್ಕ್ನಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಅವರು ಭಾಗವಹಿಸಿದ್ದರು. ಬಳಿಕ ಮಾತನಾಡಿದ ವೆಂಕಟೇಶ್ ಒಳಮೀಸಲಾತಿಗೆ ಸಂಬಂಧಿಸಿದಂತೆ ವರದಿಯನ್ನು ಶೀಘ್ರವೇ ಜಾರಿಮಾಡಬೇಕು ಎಂದು ಆಗ್ರಹಿಸಿದರು.
ಸದಾಶಿವ ವರದಿ ಜಾರಿಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ಕಾಂಗ್ರೆಸ್ ನಾಯಕರಿಗೆ ಮನವಿ:ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ 20ಕ್ಕೂ ಹೆಚ್ಚು ಪದಾಧಿಕಾರಿಗಳು ಜಿಲ್ಲಾಧ್ಯಕ್ಷರುಗಳು ಒಳಮೀಸಲಾತಿ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ವತಿಯಿಂದ ಒತ್ತಾಯ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಕೋಗಿಲು ವೆಂಕಟೇಶ್ ಮನವಿ ಮಾಡಿದರು.
ನ್ಯಾ. ಎ. ಟಿ. ಸದಾಶಿವ ವರದಿಯನ್ನು ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಈ ವಿಷಯದ ಬಗ್ಗೆ ಸದನದಲ್ಲಿ ತೀರ್ಮಾನ ಮಾಡಿದ ವರದಿಯನ್ನು ಸರ್ಕಾರವು ಹೋರಾಟ ಸಮಿತಿಗೆ ತಿಳಿಸಬೇಕು. ಕೇಂದ್ರ ಸರ್ಕಾರವು ಸಂವಿಧಾನ ಪರಿಚ್ಛೇದ 341(3)ಕ್ಕೆ ಕೂಡಲೇ ತಿದ್ದುಪಡಿ ಮಾಡಬೇಕು.
ಇದನ್ನೂ ಓದಿ:ಒಳಮೀಸಲಾತಿ ವರದಿ ಅನುಮೋದನೆಗೆ ಆಗ್ರಹಿಸಿ ಮಾದಿಗ ದಂಡೋರ ಸಮಿತಿ ಪ್ರತಿಭಟನೆ
ತಮಿಳುನಾಡಿನ ಮಾದರಿಯಲ್ಲಿ ಆರುಂಧತಿಯ ಸಮುದಾಯಕ್ಕೆ ಶೇ.2.84 ಮೀಸಲಾತಿ ನೀಡಿದಂತೆ ಸುಪ್ರೀಂ ಕೋರ್ಟ್ ನ್ಯಾ. ಅರುಣ್ ಮಿಶ್ರಾ ತೀರ್ಪು ಆಧರಿಸಿ ರಾಜ್ಯ ಸರ್ಕಾರಕ್ಕಿರುವ ಅಧಿಕಾರವನ್ನು ಉಪಯೋಗಿಸಿ ಪ್ರತ್ಯೇಕವಾಗಿ ಮಾದಿಗ ಮಾದಿಗರಿಗೆ ಸಂಬಂಧಿತ ಜಾತಿಗಳಿಗೆ ಶೇ.6 ಮೀಸಲಾತಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಗೌರವ ಕಾರ್ಯದರ್ಶಿ ಮರಿಸ್ವಾಮಿ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಡಿ.ಎಸ್.ಎಸ್, ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.