ಬೆಂಗಳೂರು : ಪರಿಶಿಷ್ಟ ಪಂಗಡದವರಿಗೆ ಶೇ. 3 ರಿಂದ ಶೇ. 7.5ಕ್ಕೆ ಮೀಸಲಾತಿ ಹೆಚ್ಚಿಸಲು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ಧರಣಿ ನಡೆಸಲಾಯಿತು.
ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದ ಧರಣಿನಿರತರು, ಸಮುದಾಯದ ವಿದ್ಯಾರ್ಥಿಗಳು, ನಿರುದ್ಯೋಗ ಯುವಕ ಯುವತಿಯರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಶೇ. 7.5 ರಷ್ಟು ಮೀಸಲಾತಿ ಸಿಗಬೇಕೆಂದು ಒತ್ತಾಯಿಸಿದರು.
ಸರ್ಕಾರ 2019, ಜುಲೈ 22 ರಂದು ಆದೇಶ ಹೊರಡಿಸಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಲಾಗಿತ್ತು. 2020, ಜುಲೈ 2 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿ ಕೂಡಲೇ ಜಾರಿಗೊಳಿಸಬೇಕೆಂದು ಮನವಿ ಮಾಡಲಾಗಿತ್ತು. ಆದರೆ, ಇದುವರೆಗೂ ಜಾರಿಯಾಗಿಲ್ಲ ಎಂದು ಮುಖಂಡರು ಹೇಳಿದರು.
ಸ್ವಾಮೀಜಿ ನೇತೃತ್ವದಲ್ಲಿ ಧರಣಿ ಪ್ರತ್ಯೇಕ ಪರಿಶಿಷ್ಟ ಪಂಗಡವರಿಗೆ ಸಚಿವಾಲಯ ರಚಿಸುವಂತೆ, ನಕಲಿ ಜಾತಿ ಪ್ರಮಾಣಪತ್ರ ಪಡೆಯುವವರ ವಿರುದ್ಧ ಮತ್ತು ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮತ್ತು ಶ್ರೀರಾಮನ ಮಂದಿರದ ಜೊತೆ ಮಹರ್ಷಿ ವಾಲ್ಮೀಕಿ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು. ಶಾಸಕ ಸತೀಶ್ ಜಾರಕಿಹೊಳಿ ಸೇರಿದಂತೆ ಸಮುದಾಯದ ಹಲವು ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.