ಬೆಂಗಳೂರು: ಬೇಸಿಗೆ ಸಮೀಪವಾಗುತ್ತಿದ್ದಂತೆ ನಗರದಲ್ಲಿ ನೀರಿನ ಅಭಾವ ಸೃಷ್ಠಿಯಾಗುತ್ತಿದೆ. ಕೆಲವೊಂದು ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಆದರೆ, ಇರುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡದೇ ಕುಡಿಯುವ ನೀರಿನಲ್ಲಿ ತ್ಯಾಜ್ಯ ಸೇರಿ ಕಲುಷಿತಗೊಂಡಿದೆ. ಇದನ್ನು ಬಗೆಹರಿಸಿ ಎಂದು ವಾರ್ಡ್ ನಂ.3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬಿಬಿಎಂಪಿ ವಾರ್ಡ್ ನಂ. 3ರ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ ಕುಡಿಯುವ ನೀರಿನ ಅಸಮರ್ಪಕ ಪೂರೈಕೆ ಹಾಗೂ ಕಲುಷಿತಗೊಂಡಿರುವ ಬಗ್ಗೆ ವಾರ್ಡ್ ನಂ. 3 ಮತ್ತು 4ರ ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್ ಬಳಿ ದೂರು ನೀಡಿದರೆ ದುರ್ವರ್ತನೆ ತೋರತ್ತಿದ್ದಾರೆಂದು ಆರೋಪಿಸಿದ್ದಾರೆ. ಹೀಗಾಗಿ ಇವರ ದುರ್ನಡತೆ ಖಂಡಿಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಟ್ರಸ್ಟ್ ಹಾಗೂ ಬೆಟ್ಟಹಳ್ಳಿ ಮಹಿಳೆಯರು ಖಾಲಿ ಕೊಡಗಳನ್ನು ಪ್ರದರ್ಶಿಸಿ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.