ಬೆಂಗಳೂರು : ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ, ನಗರದ ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ( ಬಿಐಟಿ) ಕಾಲೇಜು ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ಕಾಲೇಜಿನ ವಿದ್ಯಾರ್ಥಿ ಜಯಂತ್ ರೆಡ್ಡಿ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಹೀಗಾಗಿ, ಈ ತಿಂಗಳ 1 ರಿಂದ 30ರವರೆಗೆ ನಡೆಯಲಿರುವ ಪರೀಕ್ಷೆಗಳನ್ನು ರದ್ದುಪಡಿಸುವಂತೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆ ಬಿಐಟಿ ಕಾಲೇಜ್ ಬಳಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಬಿಐಟಿ ಕಾಲೇಜು ಮುಂದೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲ, ವಿದ್ಯಾರ್ಥಿಯ ಆತ್ಮಹತ್ಯೆಯಿಂದ ನನಗೂ ತಂಬಾ ಬೇಜಾರಾಗಿದೆ. ಈ ಕಾಲೇಜು ಶುರುವಾಗಿ 42 ವರ್ಷಗಳಾಯಿತು. ಈ ಅವಧಿಯಲ್ಲಿ ಇದು ಮೊದಲ ಅವಘಡ. ಘಟನೆಯಿಂದ ನಾವು ಕೂಡ ಆತಂಕಗೊಂಡಿದ್ದೇವೆ. ವಿದ್ಯಾರ್ಥಿ ಜಯಂತ್ ರೆಡ್ಡಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡನೋ ಗೊತ್ತಿಲ್ಲ. ಆತನ ಆತ್ಮಕ್ಕೆ ಶಾಂತಿ ಸಿಗಲಿ, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು.
ಓದಿ : ಕಟ್ಟಡದಿಂದ ಜಿಗಿದು ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ: ಪ್ರಕರಣದ ಸುತ್ತ ಹತ್ತಾರು ಅನುಮಾನ!
ವಿದ್ಯಾರ್ಥಿಗಳು ಪರೀಕ್ಷೆ ನಡೆಸದಂತೆ ಬೇಡಿಕೆ ಇಟ್ಟಿದ್ದಾರೆ, ಈ ಬಗ್ಗೆ ನಾವು ವಿಶ್ವವಿದ್ಯಾನಿಲಯದ ಗಮನಕ್ಕೆ ತರುತ್ತೇವೆ. ಒಂದು ಪರೀಕ್ಷೆಯಿಂದ ಇನ್ನೊಂದು ಪರೀಕ್ಷೆಯ ನಡುವೆ ಸಮಯವಿದೆ. ಪರೀಕ್ಷೆ ಮುಂದೂಡಿದರೆ ಮರು ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ ಎಂದರು. ಅಲ್ಲದೆ, ಪ್ರತಿಭಟನಾ ನಿರತರ ಬಳಿಗೆ ತೆರಳಿ ಭರವಸೆ ಈಡೇರಿಸುವುದಾಗಿ ತಿಳಿಸಿ ಮನವೊಲಿಸುವ ಪ್ರಯತ್ನ ಮಾಡಿದರು. ಮೃತ ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.