ಬೆಂಗಳೂರು:ಹಬ್ಬದ ಹಿನ್ನೆಲೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಹೂವು, ಸೊಪ್ಪು, ತರಕಾರಿ ಬಟ್ಟೆ ಮಾರಾಟಕ್ಕೆ ಬಿಬಿಎಂಪಿ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಹಬ್ಬದ ಮಾರಾಟ ವಸ್ತುಗಳನ್ನು ಹಿಡಿದು ಬೀದಿ ಬದ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ಘಟನೆ ಜಯನಗರ ಶಾಪಿಂಗ್ ಕಾಂಪ್ಲೆಕ್ ಮುಂಭಾಗ ನಡೆಯಿತು.
ರಸ್ತೆಯಲ್ಲೇ ಸೊಪ್ಪು ತರಕಾರಿ ಹಿಡಿದು ವ್ಯಾಪಾರಿಗಳು ಕುಳಿತು ಪ್ರತಿಭಟನೆ ನಡೆಸುವ ವೇಳೆ ತರಕಾರಿ ಬುಟ್ಟಿಗಳನ್ನು ತಲೆಯ ಮೇಲೆ ಹೊತ್ತು ಧಿಕ್ಕಾರ ಕೂಗಿದರು. ನಿನ್ನೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂಕ್ರಾಂತಿ ಹಬ್ಬಕ್ಕೆ ನಮ್ಮ ಹೊಟ್ಟೆ ಮೇಲೆ ಹೊಡೆಯ ಬೇಡಿ ಎಂದು ಮನವಿ ಮಾಡಿದರು. ಬಂಡವಾಳ ಹೂಡಿ ವಸ್ತುಗಳನ್ನು ತಂದಿದ್ದೇವೆ. ಆದರೆ, ಮಾರಾಟ ಮಾಡಲು ಆಗುತ್ತಿರಲ್ಲ, ಕನಿಷ್ಠ ಪಕ್ಷ ಮೂರು ದಿನಗಳ ಮಟ್ಟಿಗಾದರೂ ಅವಕಾಶ ಕೊಡಿ ಎಂದು ವಿನಂತಿಸಿದರು.
ವಾಹನಗಳ ಪಾರ್ಕಿಂಗ್ಗೆ ಪಾದಚಾರಿ ಮಾರ್ಗದಲ್ಲಿ ಸ್ಥಳ ನೀಡುವುದಾದರೆ ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತಿರುವ ನಮಗೆ ಯಾಕೆ ನೀಡಬಾರದು ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಬಿಬಿಎಂಪಿ ಮಾರ್ಷಲ್ಗಳು ಬೀದಿ ಬದಿಯ ವ್ಯಾಪಾರಿಗಳಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ. ಈ ಹಿಂದೆ ನಮ್ಮ ಕಿರುಕುಳದ ಬಗ್ಗೆ ದೂರು ನೀಡಿ 2014 ರ ಕಾಯಿದೆಯ ಅನ್ವಯ ಬೀದಿ ಬದಿ ವ್ಯಾಪಾರಿಗಳಿಗೆ ರಕ್ಷಣೆ ನೀಡುವಂತೆ ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಪಟ್ಟಣ ವ್ಯಾಪಾರ ಸಮಿತಿ ಕರೆದಿಲ್ಲ. ನಮ್ಮ ಮೇಲೆ ನಡೆಯುತ್ತಿರುವ ಕಿರುಕುಳ ನಿಂತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.