ಬೆಂಗಳೂರು: ಲಾಕ್ಡೌನ್ ಪರಿಣಾಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನ್ಯಾಯವಾದಿಗಳಿಗೆ ನೂರು ಕೋಟಿ ರೂಪಾಯಿಗಳ ಪರಿಹಾರ ನೀಡುವಂತೆ ಒತ್ತಾಯಿಸಿ ವಕೀಲರು ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಪ್ರತಿಭಟನೆ ನಡೆಸಿದರು. ಇಂದು ಮಧ್ಯಾಹ್ನ ಸಿಟಿ ಸಿವಿಲ್ ಕೋರ್ಟ್ ಎದುರು ಜಮಾಯಿಸಿದ ನೂರಾರು ವಕೀಲರು ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಪರಿಹಾರ ಕೋರಿ ವಕೀಲರಿಂದ ಪ್ರತಿಭಟನೆ ಜೊತೆಗೆ ರಾಜ್ಯದ ಎಲ್ಲ ಕೋರ್ಟ್ಗಳನ್ನು ಪೂರ್ಣಪ್ರಮಾಣದಲ್ಲಿ ನಡೆಸಲು ಕ್ರಮಕೈಗೊಳ್ಳಬೇಕು. ಹಲವು ತಾಂತ್ರಿಕ ಸಮಸ್ಯೆಗಳನ್ನು ಸೃಷ್ಟಿಸಿರುವ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ಕ್ರಮ ಕೈಬಿಟ್ಟು, ಫಿಸಿಕಲ್ ಕೋರ್ಟ್ಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ವಕೀಲರು ವೃತ್ತಿಯಲ್ಲಿ ಸಿಗುವ ದೈನಂದಿನ ಆದಾಯ ನಂಬಿ ಬದುಕುತ್ತಿದ್ದು, ಲಾಕ್ಡೌನ್ ಬಳಿಕ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಪರಿಣಾಮವಾಗಿ ಇಬ್ಬರು ವಕೀಲರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೀಗಾಗಿ ಪರಿಹಾರ ನೀಡಲು ಮತ್ತು ಪೂರ್ಣ ಪ್ರಮಾಣದಲ್ಲಿ ಫಿಸಿಕಲ್ ಕೋರ್ಟ್ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ಬಳಿಕ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಪತ್ರ ಸಲ್ಲಿಸಲು ಮುಂದಾದರೂ ಪೂರ್ವಾನುಮತಿ ಪಡೆಯದ ಕಾರಣ ಸಾಧ್ಯವಾಗಲಿಲ್ಲ.
ಪ್ರತಿಭಟನೆಯಲ್ಲಿ ವಕೀಲರಾದ ಬಾಲನ್, ಭಕ್ತವಚಲ, ಮುನಿಯಪ್ಪ, ಎಲ್. ಭರತ್, ರಘು, ದೊರೆರಾಜು, ಮನೋರಂಜನಿ, ಸುಮನ ಹೆಗಡೆ, ವೀಣಾ, ನಿರ್ಮಲಾ ಸೇರಿದಂತೆ ನೂರಾರು ವಕೀಲರು ಭಾಗವಹಿಸಿದ್ದರು.
ಪರಿಹಾರ ಕೋರಿ ವಕೀಲರಿಂದ ಪ್ರತಿಭಟನೆ ವಕೀಲರ ಬೇಡಿಕೆಗಳೇನು:
- ಸಂಕಷ್ಟದಲ್ಲಿರುವ ವಕೀಲರಿಗೆ ಪರಿಹಾರ ನೀಡಲು ಸರ್ಕಾರ 100 ಕೋಟಿ ಬಿಡುಗಡೆ ಮಾಡಬೇಕು.
- ರಾಜ್ಯದಾದ್ಯಂತ ಫಿಸಿಕಲ್ ಕೋರ್ಟ್ಗಳನ್ನು ಆರಂಭಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು.
- ವಕೀಲರಿಗೆ ಪರಿಹಾರ ನೀಡಲು ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘ ಮುಂದಾಗಬೇಕು.
- ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಒಟ್ಟಾರೆ ವಕೀಲ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಬೇಕು.
- ಸಮಸ್ಯೆ ಪರಿಹರಿಸದಿದ್ದರೆ ಜಿಲ್ಲಾ - ತಾಲೂಕು ಮಟ್ಟದಲ್ಲಿ ಪ್ರತಿಭಟನೆ ಮತ್ತು ಸರಣಿ ಉಪವಾಸ ಆರಂಭಿಸಲಾಗುವುದು.