ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಕರ್ನಾಟಕ ಶಾಖೆಯು ದಲಿತ ಸಂಘರ್ಷ ಸಮಿತಿ ಸಹಕಾರದೊಂದಿಗೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಶಿಕ್ಷಣ ಸಚಿವ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ದ ಆಕ್ರೋಶ: ದಲಿತ ಸಮುದಾಯದಿಂದ ಪ್ರತಿಭಟನೆ ಸಂವಿಧಾನ ದಿನದ ಸಂದರ್ಭದಲ್ಲಿಯೇ ನಗರದಲ್ಲಿ ಸಮಾವೇಶ ಹಾಗೂ ರ್ಯಾಲಿ ಹಮ್ಮಿಕೊಂಡಿದ್ದ ಪ್ರತಿಭಟನಾಕಾರರು, ಶಿಕ್ಷಣ ಸಚಿವರು ಸಂವಿಧಾನ ವಿರೋಧಿಯಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು. ಶಿಕ್ಷಣ ಇಲಾಖೆಯ ಮೇಲಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಸಿಎಂಸಿಎ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ಕೇಂದ್ರ ರೈಲು ನಿಲ್ದಾಣದಿಂದ ಸ್ವತಂತ್ರ ಉದ್ಯಾನವನದವರೆಗೆ ನೂರಾರು ಮಂದಿ ಪ್ರತಿಭಟನಾಕಾರರು ಮೆರವಣಿಗೆ ತೆರಳಿ ಉದ್ಯಾನವನದಲ್ಲಿ ಸಮಾವೇಶ ನಡೆಸಿದರು.
ಸಂವಿಧಾನ ದಿನವನ್ನು ಶಾಲೆಗಳಲ್ಲಿ ಆಚರಿಸದಂತೆ ಆದೇಶಿಸಿ ರಾಜ್ಯ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರಿಂದ ವಿವಾದಾತ್ಮಕ ಸುತ್ತೋಲೆಯನ್ನು ಹಿಂಪಡೆದು ಕೇವಲ ಇಲಾಖೆ ಇಬ್ಬರು ನಿರ್ದೇಶಕರು ಅಮಾನತು ಮಾಡಿ ಕೈತೊಳೆದುಕೊಳ್ಳಲಾಗಿದೆ. ಆದರೆ ಸಂವಿಧಾನ ಹಾಗೂ ಸಂವಿಧಾನ ನಿರ್ಮಾಣ ಮಾಡಿರುವ ಅಂಬೇಡ್ಕರ್ ಗೆ ಆಗಿರುವ ಅವಮಾನದ ಜವಾಬ್ದಾರರು ಶಿಕ್ಷಣ ಸಚಿವರು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರ ತಲೆದಂಡವಾಗುವಬೇಕೆಂದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಪ್ರಗತಿಪರ ಹಿಂದುಳಿದ ವರ್ಗಗಳ ಸಂಘಟನೆಗಳು, ಮಹಿಳಾ ಸಂಘಗಳು, ಒಬಿಸಿ, ಎಸ್ಸಿ ಎಸ್ಟಿ, ಆರ್ಎಮ್ ನೌಕರರು, ವಕೀಲರು ಮತ್ತು ಗುತ್ತಿಗೆದಾರರು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಮಾಜದ ವಿವಿಧ ಮುಖಂಡರು ಹಾಗೂ ಮಠಾಧಿಪತಿಗಳು ಕೂಡ ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.