ಬೆಂಗಳೂರು:ಕಸ ನಿರ್ವಹಣೆ ಶುಲ್ಕವನ್ನು ರೂ. 200 ರಿಂದ 600ಕ್ಕೆ ಹೆಚ್ಚಳ ಮಾಡಿ ಸಾರ್ವಜನಿಕರನ್ನು ಸುಲಿಗೆ ಮಾಡಲು ಹೊರಟಿದೆ. ಈ ಶುಲ್ಕ ಸಂಗ್ರಹ ಜವಾಬ್ದಾರಿಯನ್ನು ಬೆಸ್ಕಾಂಗೆ ನೀಡುವ ಬಿಬಿಎಂಪಿಯ ತೀರ್ಮಾನವನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ. ಈ ಕೂಡಲೇ ತೀರ್ಮಾನವನ್ನು ಹಿಂಪಡೆಯಬೇಕು. ಇಲ್ಲದೇ ಇದ್ದರೆ ಬಿಬಿಎಂಪಿ ವಿಧಿಸುವ ಯಾವುದೇ ತೆರಿಗೆಗಳನ್ನು ಕಟ್ಟದೆ ಬೆಂಗಳೂರಿನಲ್ಲಿ ಕರ ನಿರಾಕರಣೆ ಚಳವಳಿ ಪ್ರಾರಂಭಿಸಬೇಕಾಗುತ್ತದೆ ಎಂದು ಆಪ್ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಎಚ್ಚರಿಕೆ ನೀಡಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರ ಬಡವರನ್ನು ಸುಲಿದು ತಿನ್ನಲು ಹೊರಟಿದೆ. ವಿದ್ಯುತ್ ಬಿಲ್ ಕೂಡಾ ಹೆಚ್ಚಿಸಿದೆ. ನಂತರ ನೀರಿನ ಬಿಲ್ ಜಾಸ್ತಿ ಮಾಡಿದೆ. ಈಗ ಕಸ ನಿರ್ವಹಣೆಗೂ ಶುಲ್ಕ ಹೆಚ್ಚಳ ಮಾಡಿ ಅದನ್ನು ಹಿಂಬಾಗಿಲ ಮೂಲಕ ಜನರನ್ನು ಹೆದರಿಸಿ, ಬೆದರಿಸಿ ಬೆಸ್ಕಾಂ ಮೂಲಕ ಸಂಗ್ರಹಿಸಲು ಹೊರಟಿದೆ. ಈ ಜನ ವಿರೋಧಿ ನಡೆಯನ್ನು ಸಹಿಸುವುದಿಲ್ಲ ಎಂದರು.