ಬೆಂಗಳೂರು:ಲೈಂಗಿಕ ದೌರ್ಜನ್ಯ ಸಂಬಂಧಭಾರತೀಯ ಕುಸ್ತಿಪಟುಗಳ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟ ಬೆಂಬಲಿಸಿ ವಿವಿಧ ದಲಿತಪರ, ಮಹಿಳಾ, ಮುಸ್ಲಿಂ ಸಂಘಟನೆಗಳು ಸೇರಿದಂತೆ ಹಲವರು ನಗರದ ಫ್ರೀಡಂ ಪಾರ್ಕ್ನಲ್ಲಿ ಇಂದು ಪ್ರತಿಭಟನೆಯನ್ನು ನಡೆಸಿದರು.
ಮಹಿಳಾ ಕುಸ್ತಿಪಟುಗಳ ಮೇಲೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ದೌರ್ಜನ್ಯವನ್ನು ನಡೆಸಿದ್ದಾರೆ ಎಂದು ಆರೋಪಿಸಿ ನಾಲ್ಕು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆಯನ್ನು ಮಾಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸದೆ ಆರೋಪಿಯನ್ನು ರಕ್ಷಣೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ಥರು ದೆಹಲಿ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮವನ್ನು ಜರುಗಿಸಿಲ್ಲ. ಹಾಗಾಗಿ ಸಂತ್ರಸ್ಥರು ಕೋರ್ಟ್ ಮೊರೆ ಹೋಗಿ, ಆರೋಪಿ ಮೇಲೆ ಎರಡು ಎಫ್‌ಐಆರ್‌ಗಳ ದಾಖಲಾಗುವಂತೆ ಮಾಡಿದ್ದಾರೆ. ಆದರೆ ಇದುವರೆಗೂ ಆರೋಪಿಗಳನ್ನು ಸರ್ಕಾರ ಬಂಧಿಸಿಲ್ಲ. ಈ ಮೂಲಕ ಬಿಜೆಪಿ ಸರ್ಕಾರವು ಆರೋಪಿಗಳ ರಕ್ಷಣೆಗೆ ನಿಂತಿದೆ ಎಂದು ದೂರಿದರು.
ಈ ದೇಶದಲ್ಲಿ ಮಹಿಳಾ ಕ್ರೀಡಾಪಟುಗಳು ಪದಕಗಳನ್ನು ಗೆದ್ದರೆ, ಸನ್ಮಾನ ಮಾಡಲಾಗುತ್ತದೆ. ಆದರೆ ತಮಗೆ ಅನ್ಯಾಯವಾಗುತ್ತಿದೆ ಎಂದರೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಈಗಾಗಲೇ ಮಹಿಳೆಯರು ಕ್ರೀಡೆಯಲ್ಲಿ ಹಿಂದುಳಿದಿದ್ದಾರೆ. ಈಗ ಮಹಿಳಾ ಕ್ರೀಡಾಪಟುಗಳು ತಮಗೆ ಅನ್ಯಾಯವಾಗಿದೆ ಎಂದು ಬೀದಿಗೆ ಬಂದಿದ್ದಾರೆ. ಅವರಿಗೆ ನ್ಯಾಯವನ್ನು ಕೊಡಿಸದೆ ಇದ್ದರೆ, ಮಹಿಳೆಯರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವೇ ಎಂದು ಪ್ರತಿಭಟನಾಕಾರರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.