ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಲ್) ಗೆ ಸಮಗ್ರ ತಿದ್ದುಪಡಿ ಮಾಡಬೇಕೆಂದು ಆಗ್ರಹಿಸಿ ಭೂ ಸಂತ್ರಸ್ತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 6 ತಿಂಗಳು ಪೂರ್ಣಗೊಂಡಿದೆ.
ಜುಲೈ 3 ರಿಂದ ಆರಂಭವಾಗುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಸಮಗ್ರ ತಿದ್ದುಪಡಿ ಮಸೂದೆ ಮಂಡಿಸಿ ಅನುಮೋದನೆ ಪಡೆಯಬೇಕೆಂದು ಎಸ್.ಸಿ.ಎಸ್.ಟಿ, ಪಿಟಿಸಿಎಲ್ ಕಾಯ್ದೆ ವಂಚಿತರ ಹೋರಾಟ ಸಮಿತಿ ಹಾಗೂ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ ಆಗ್ರಹಿಸಿದೆ.
ಹೋರಾಟಕ್ಕೆ 160 ದಿನಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಮಗ್ರ ತಿದ್ದುಪಡಿಗೆ ಆಗ್ರಹಿಸಿ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಸಿದ ಸಂಘಟನೆಗಳು ಈ ಕುರಿತು ನಿರ್ಣಯ ಕೈಗೊಂಡಿವೆ. ಜುಲೈ 3 ರಿಂದ ಆರಂಭವಾಗುತ್ತಿರುವ ಹಾಲಿ ಸರ್ಕಾರದ ಚೊಚ್ಚಲ ವಿಧಾನಮಂಡಲ ಜಂಟಿ ಅಧಿವೇಶನದಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬೇಕು. ದಲಿತ ಸಮುದಾಕ್ಕೆ ನೀಡಿರುವ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಎಸ್ಸಿ, ಎಸ್ಟಿ ಸಮುದಾಯದ ಲಕ್ಷಾಂತರ ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು, ಕಾಯ್ದೆಗೆ ತಿದ್ದುಪಡಿ ತಂದು ದಲಿತ ಸಮಯದಾಯವನ್ನು ಬಲಪಡಿಸಬೇಕು. ಸಾಮಾಜಿಕ ಮತ್ತು ಆರ್ಥಿಕವಾಗಿ ಸದೃಢರನ್ನಾಗಿಮಾಡಿ ಸಂವಿಧಾನದ ಆಶಯದಂತೆ ಮತ್ತು ನುಡಿದಂತೆ ನಡೆಯಬೇಕು ಎಂದು ಭೂವಂಚಿತರ ಹೋರಾಟ ಸಮಿತಿ ಮುಖಂಡ ಮಂಜುನಾಥ್ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಭೂ ಪರಭಾರೆ ನಿಷೇಧ ಕಾಯ್ದೆ (ಪಿಟಿಸಿಎಲ್)ಗೆ ಸಮಗ್ರ ತಿದ್ದುಪಡಿಯನ್ನು ನಮ್ಮ ಸರಕಾರ ಮಾಡಲಿದ್ದು, ದಲಿತರ ರಕ್ಷಣೆಗೆ ಸದಾ ಬದ್ಧರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಭರವಸೆ ನೀಡಿದ್ದಾರೆ.
ದಲಿತರ ಭೂಮಿಯ ಹಕ್ಕನ್ನು ಬಲಪಡಿಸುವ ಪಿಟಿಸಿಎಲ್ ಕಾಯ್ದೆಯ ಸಮಗ್ರ ತಿದ್ದುಪಡಿ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಜಾರಿ ಮಾಡಲಿದೆ ಎಂದು ಹೇಳಿದ್ದರು, ಅದು ಈಡೇರಬೇಕು ಎಂದರು. ಭೂಮಿ ನಮ್ಮ ಹಕ್ಕು, ಅದನ್ನು ರಕ್ಷಿಸಿಕೊಳ್ಳಲು ಪಿಟಿಸಿಎಲ್ ಕಾಯ್ದೆಯನ್ನು ಸಂರಕ್ಷಿಸಿ ಬಲಗೊಳಿಸಬೇಕಿದೆ. ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಯ್ದೆ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರಿಂದ ದಲಿತರ ಭೂಮಿ ಹಕ್ಕು ರಕ್ಷಣೆಗೆ ಗಂಡಾಂತರ ಎದುರಾಗಿದೆ. ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.
ರಾಜ್ಯದ 50 ಸಾವಿರ ಪ್ರಕರಣಗಳಲ್ಲಿ ಪರಿಶಿಷ್ಟರಿಗೆ ಅನ್ಯಾಯವಾಗಿದೆ. ಕಾಯ್ದೆಯ ವಿರುದ್ಧ ತೀರ್ಪಿನಿಂದ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ದಲಿತ ಸಂಘಟನೆಗಳ ಪ್ರತಿಭಟನೆಗಳಿಗೆ ಸರ್ಕಾರ ಸ್ಪಂದಿಸಿ, ಕಂದಾಯ ಇಲಾಖೆ ಕಾಯ್ದೆಯ ಪ್ರಕರಣಗಳಿಗೆ ಕಾಲಮಿತಿ ಅನ್ವಯವಾಗುವುದಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದರೂ, ನ್ಯಾಯದಾನದಲ್ಲಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜ್ಞಾನ ಪ್ರಕಾಶ್ ಸ್ವಾಮೀಜಿ, ಹರಳಯ್ಯ ಸ್ವಾಮೀಜಿ, ಬಸವನಾಗಿದೇವ ಸ್ವಾಮೀಜಿ, ದಲಿತ ಸಂಘಟನೆಗಳ ಮುಖಂಡುರಗಳಾದ ಹೆಣ್ಣೂರು ಶ್ರೀನಿವಾಸ್, ಬಿ. ಗೋಪಾಲ್, ಎನ್. ಮೂರ್ತಿ, ಹರಿರಾಮ್, ಮೋಹನ್ ರಾಜ್, ರಾಮಣ್ಣ, ಪಿಟಿಸಿಲ್ ಮಂಜುನಾಥ್, ಅಭಿಗೌಡ್ರು, ಗಂಗಮ್ಮ, ಸಿದ್ದರಾಜ, ಬಿ.ಎಂ ವೆಂಕಟೇಶ್, ಕಿರಣ್ ಕುಮಾರ್, ಹೆಬ್ಬಾಳ ವೆಂಕಟೇಶ್, ಈಶ್ವರ್ ಮಂಜುನಾಥ್, ಸುರೇಶ್, ಸಂತೋಷ್, ಜೆ.ವಿ. ವೆಂಕಟೇಶ್, ನಾಗರಾಜ ಬಸವರಾಜ ಕೌತಾಳ್, ಆರೋಲಿಕರ್, ಮಂಜು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸೇವೆ ಖಾಯಂ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ