ಬೆಂಗಳೂರು:ಮಹಿಳೆ ಮೇಲೆ ಸಚಿವ ಸೋಮಣ್ಣ ಹಲ್ಲೆ ನಡೆಸಿದ್ದಾರೆ. ಕೂಡಲೇ ಅವರ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಟಿಸಿದ ಮಹಿಳಾ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಮೇಲೆ ಸೋಮಣ್ಣ ಹಲ್ಲೆ ವಿಚಾರ ಪುಷ್ಪಾ ಅಮರನಾಥ್ ಮಾಧ್ಯಮಗಳ ಜೊತೆ ಮಾತನಾಡಿ, ದೀಪಾವಳಿ ಹಬ್ಬದ ಆಚರಣೆ ಇದೆ. ಮಹಿಳೆಯರ ಹಬ್ಬ ಆಚರಣೆಗೂ ಬೆಲೆ ಇಲ್ಲ. ಸೋಮಣ್ಣನವರಿಂದ ಇಂತಹ ನಡವಳಿಕೆ ನಿರೀಕ್ಷಿಸಿರಲಿಲ್ಲ. ಇದು ಬಿಜೆಪಿ ನಡೆ. ಹೆಣ್ಣು ಸಮಾಜದಲ್ಲಿ ಮುಖ್ಯ ವೇದಿಕೆಗೆ ಬರುತ್ತಾರೆ ಎಂದಾಗ ಅವರನ್ನು ತುಳಿಯುವ ಪ್ರಯತ್ನ ಮಾಡುತ್ತೀರಿ. ಮಹಿಳೆಯರಿಗೆ ಸಮಾಜದಲ್ಲಿ ಎರಡನೇ ಸ್ಥಾನದಲ್ಲೇ ಇಟ್ಟು ಬಿಜೆಪಿಯವರು ನೋಡುತ್ತಾರೆ. ಮಹಿಳೆಯರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.
ಅವರೆಲ್ಲರೂ ರಾಮನ ಭಕ್ತರೇ? ಮೂರು ನಿಮಿಷಕ್ಕೆ 15 ಅತ್ಯಾಚಾರ ನಡೆಯುತ್ತಿದೆ. ದೇಶದಲ್ಲಿ ಅತ್ಯಾಚಾರ ತಡೆಯೋಕೆ ಆಗ್ತಿದ್ಯಾ? ನಾವಷ್ಟೇ ಅಲ್ಲ, ಶೋಭಕ್ಕ ಬೀದಿಗೆ ಬರಬೇಕು. ಶಶಿಕಲಾ ಜೊಲ್ಲೆ, ಮಾಳವೀಕ ಅಕ್ಕ ನೀವು ಹೊರಗೆ ಬನ್ನಿ. ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ. ನಿಮಗೆ ನಾಚಿಕೆ ಇದ್ಯಾ? ಮರ್ಯಾದೆ ಇದ್ಯಾ? ಈಗ ಯಾಕೆ ಬಾಯಿ ಮುಚ್ಚಿಕೊಂಡಿದ್ದೀರಾ? ಮೊನ್ನೆ ಲಿಂಬಾವಳಿ ಏನು ಮಾಡಿದರು. ಅವರ ಮೇಲೆ ಏನಾದರೂ ಕ್ರಮ ಜರುಗಿಸಿದ್ದಾರಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ ;ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ. ಸೋಮಣ್ಣ