ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಜಾರಿಗೊಳಿಸುತ್ತಿರುವ ಪೆರಿಫೆರಲ್ ರಿಂಗ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಕೂಡಲೇ ಪರಿಹಾರ ನೀಡಿ, ಇಲ್ಲವಾದಲ್ಲಿ ಯೋಜನೆಯನ್ನೇ ರದ್ದುಗೊಳಿಸಿ ಎಂದು ಫೆರಿಫೆರಲ್ ರಸ್ತೆ ಭೂಸ್ವಾಧೀನದ ವಿರುದ್ಧ ರೈತರು ಹೋರಾಟ ಸಮಿತಿ ನಡೆಸಿದೆ. ಬಿಡಿಎ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ಭೂ ವಶಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆ ಅನ್ವಯ ಪರಿಹಾರ ಕೊಡಿ, ಇಲ್ಲವಾದಲ್ಲಿ ಅಧಿಸೂಚನೆಯಿಂದ ಭೂಮಿಯನ್ನು ಕೈಬಿಡಿ ಎಂದು ಪ್ರತಿಭಟಿಸಿದ್ದಾರೆ.
2013ರ ಭೂಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಜಮೀನು ನೀಡಲು ರೈತರು ಸಿದ್ಧರಿದ್ದು, ಕಾಲಮಿತಿಯೊಳಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಯಾವುದೇ ಗಟ್ಟಿಯಾದ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ. ಇಚ್ಛಾಶಕ್ತಿ ಇಲ್ಲದಿದ್ದರೆ ಭೂಸ್ವಾಧೀನ ಮಾಡಿಕೊಂಡು ರೈತರಿಗೆ ಯಾಕೆ ತೊಂದರೆ ನೀಡುತ್ತೀರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.