ಬೆಂಗಳೂರು: ರೈತ ಹಾಗೂ ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರ ಈಗ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹಾಗೂ ನಿತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕೆಪಿಸಿಸಿ ಕೇಂದ್ರ ಕಚೇರಿ ಮುಂಭಾಗ ಕೆಪಿಸಿಸಿ ಕಾರ್ಮಿಕ ವಿಭಾಗದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಟ್ಟಿಗೆ ಬಳಸಿ ಒಲೆಯಲ್ಲಿ ಅಡುಗೆ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಕೆಪಿಸಿಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿ ಗೌಡ ಮಾತನಾಡಿ, ವಿದೇಶದಲ್ಲಿ ಕಚ್ಛಾ ತೈಲಗಳ ಪ್ರತಿ ಬ್ಯಾರಲ್ಗಳು 50 ಡಾಲರ್ಗಿಂತ ಕಡಿಮೆ ಇದ್ದಾಗ ಯುಪಿಎ ಸರ್ಕಾರ ಡೀಸೆಲ್, ಪೆಟ್ರೋಲ್ ದರವನ್ನು ಸುಮಾರು 45 ರಿಂದ 50 ರೂಪಾಯಿಯಲ್ಲಿ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿತ್ತು.
ಆದರೆ, ಇದೀಗ ಅದೇ ಕಚ್ಛಾ ತೈಲದ ಬೆಲೆ 50 ರಿಂದ 55 ಡಾಲರ್ ಪ್ರತಿ ಬ್ಯಾರಲ್ಗಳಿಗೆ ಮಾರಾಟವಾಗುತ್ತಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜನರ ಮೇಲೆ ಅತಿ ಹೆಚ್ಚು ತೆರಿಗೆ ಹೇರಿದೆ. ಇದರ ಪರಿಣಾಮವಾಗಿ ಡೀಸೆಲ್ ಬೆಲೆ 85 ಹಾಗೂ ಪೆಟ್ರೋಲ್ 100 ರೂಪಾಯಿಗೆ ಏರಿಕೆ ಕಂಡಿದೆ. ಜನ ಸಾಮಾನ್ಯರ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
ಪ್ರಧಾನ ಕಾರ್ಯದರ್ಶಿಯಾದ ಬಿ ಆರ್ ದಿನೇಶ್ ಮಾತನಾಡಿ, ಪೆಟ್ರೋಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಬಡ ಕಾರ್ಮಿಕರು, ಕೂಲಿಕಾರರು, ಮಧ್ಯಮ ವರ್ಗದವರ ಮೇಲೆ ಇನ್ನಷ್ಟು ಪರಿಣಾಮ ಬೀರುತ್ತದೆ.
ಈಗಾಗಲೇ ಕೆಲಸವಿಲ್ಲದೆ ಬಡತನ ರೇಖೆಯಿಂದ ಕೆಳಗೆ ಇರುವವರ ಸಂಖ್ಯೆ ಹೆಚ್ಚಾಗಿದ್ದು, ಇಂತಹ ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರದ ಜೊತೆ ರಾಜ್ಯ ಸರ್ಕಾರವು ಕೂಡ ಅದೇ ಧೋರಣೆ ಕೈಗೊಂಡಿದೆ. ಈ ನೀತಿಗಳನ್ನು ಖಂಡಿಸಿ ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಕೊರೊನಾ ಮಹಾ ಮಾರಿಯಿಂದಾಗಿ ಯಾವುದೇ ಸೂಚನೆ ಇಲ್ಲದೇ ಲಾಕ್‌ಡೌನ್ ದೇಶಾದ್ಯಂತ ಹೇರಲಾಯಿತು. ಕೆಲಸವಿಲ್ಲದೇ, ಊಟವಿಲ್ಲದೇ, ವಲಸೆ ಕಾರ್ಮಿಕರು ಸ್ಥಳೀಯರು, ಕೂಲಿಕಾರರು ನೂರಾರು ಕಿ.ಮೀ ನಡೆದು ಹೋದ ಘಟನೆ ನಡೆದಿವೆ. ಇದು ಕಾರ್ಮಿಕ ವಲಯದ ಮೇಲೆ ಭಾರಿ ದೊಡ್ಡ ಹೊಡೆತ ಬಿದ್ದಂತಾಗಿದೆ.
ಕಾರ್ಮಿಕ ವರ್ಗವನ್ನು ಇನ್ನಷ್ಟು ಬಡತನಕ್ಕೆ ತಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ 2021ರ ಬಜೆಟ್ನಲ್ಲಿ ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಈ ಸುದ್ದಿಯನ್ನೂ ಓದಿ:ರಾಯಚೂರಿನಲ್ಲಿ ಸರಣಿ ಅಪಘಾತ; ಸ್ಥಳದಲ್ಲೇ ಇಬ್ಬರ ರ್ದುಮರಣ
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಕಾರ್ಮಿಕ ಘಟಕದ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ, ಉಪಾಧ್ಯಕ್ಷ ಕೆ ಸಿ ಹರಿಣಿಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಆರ್. ದಿನೇಶ್, ಶ್ರೀಕಾಂತ್, ಬಾಲರಾಜ್‍ಗೌಡ, ಜಿಲ್ಲಾಧ್ಯಕ್ಷ ಸತ್ಯ ನಾರಾಯಣ್, ತ್ರಿಭುವನ್ ಗೌಡ ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.