ಬೆಂಗಳೂರು:ಮದ್ಯ ಸೇವಿಸಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಆಟೋ ಚಲಾಯಿಸಿ ಶಾಲಾ ಮಕ್ಕಳ ಪ್ರಾಣಕ್ಕೆ ಕುತ್ತು ತಂದ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಮದ್ಯದ ಅಮಲಲ್ಲಿ ಆಟೋ ಚಾಲನೆ: ಚಾಲಕನ ವಶಕ್ಕೆ ಪಡೆದು ಪೊಲೀಸ್ರಿಂದ ಮಕ್ಕಳ ರಕ್ಷಣೆ - ಮಕ್ಕಳನ್ನು ರಕ್ಷಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು
ಕುಡಿದು ವಾಹನ ಚಾಲನೆ ಮಾಡಿ ಮಕ್ಕಳ ಪ್ರಾಣಕ್ಕೆ ಕುತ್ತು ತಂದಿದ್ದ ಆಟೋ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೊಮ್ಮನಹಳ್ಳಿ ಜಂಕ್ಷನ್ ಬಳಿ ಆಟೋದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಾಗುತ್ತಿತ್ತು. ಚಾಲಕ ಉಮೇಶ್‌ಗೆ ಮಕ್ಕಳು ನಿಧಾನವಾಗಿ ಆಟೋ ಓಡಿಸುವಂತೆ ತಿಳಿ ಹೇಳಿದ್ದಾರೆ. ಆದ್ರೆ, ಆತ ಮಕ್ಕಳ ಮನವಿಗೆ ಕಿವಿಗೊಡಲಿಲ್ಲ. ಅಡ್ಡಾದಿಡ್ಡಿಯಾಗಿ ಆಟೋ ಚಲಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಬೊಮ್ಮನಹಳ್ಳಿ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.ಈ ವೇಳೆ ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಆಟೋ ತಡೆದು ಚಾಲಕನ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ದಾಖಲೆಗಳಿಲ್ಲದ ಕಾರಣ ಆತನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಆಟೋದಲ್ಲಿದ್ದ ಮಕ್ಕಳ ಐಡಿ ಕಾರ್ಡ್ ನೋಡಿ ಪೋಷಕರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಆಟೋಗೆ ಬದಲಿ ಚಾಲಕ ಬರದಿರುವುದೇ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಚಾಲಕ ಉಮೇಶ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತಮ್ಮನ್ನು ರಕ್ಷಿಸಿದ ಪೊಲೀಸರಿಗೆ ಶಾಲಾ ಮಕ್ಕಳು ಚಾಕ್ಲೆಟ್ ಕೊಟ್ಟು ಥ್ಯಾಂಕ್ಸ್ ಹೇಳಿದ್ದಾರೆ.