ಬೆಂಗಳೂರು :ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ 2022 ಮತ್ತು ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ವಿಧಾನ ಪರಿಷತ್ನ ಶಾಸನ ರಚನೆ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿರುವ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ವಿಧೇಯಕ 2022 ಅನ್ನು ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಮಂಡಿಸಿದರು. ಠೇವಣಿದಾರರ ಹಿತಾಸಕ್ತಿಗೆ ತಿದ್ದುಪಡಿ ತರಲಾಗಿದ್ದು, ಅಂಗೀಕರಿಸುವಂತೆ ಮನವಿ ಮಾಡಿದರು.
ಪತ್ರಿಪಕ್ಷಗಳಿಂದ ಸಲಹೆ : ಬಿಲ್ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಬುಲ್ಡೋಜರ್ ಅಂತೀರಾ, ಯುಪಿ ಮಾದರಿ ಅಂತಾ ಕೆಲವಕ್ಕೆ ಹೇಳುತ್ತೀರಾ? ಇಂತಾ ಕೇಸ್ನಲ್ಲಿ ಯಾಕೆ ಸುಮ್ಮನಿರುತ್ತೀರಾ ಎಂದು ಪ್ರಶ್ನಿಸಿ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣ ಪ್ರಸ್ತಾಪಿಸಿದರು. ಬರೀ 5 ಲಕ್ಷ ಠೇವಣಿ ವಾಪಸ್ ನೀಡಿದರೆ ಹೇಗೆ? ಇಂತಹ ಹಗರಣದ ಎಲ್ಲ ಪ್ರಕರಣ ಸಿಬಿಐ ತನಿಖೆಗೆ ಕೊಡಿ ಎನ್ನುತ್ತಾ ಬಿಲ್‌ಗೆ ಸ್ವಾಗತ ಮಾಡಿದರು. ಪಕ್ಷಾತೀತವಾಗಿ ಹಲವು ಸದಸ್ಯರು ವಿಧೇಯಕಕ್ಕೆ ಸ್ವಾಗತ ಮಾಡಿ ಕೆಲವೊಂದು ಸಲಹೆ ನೀಡಿದರು.
ಮೂಲ ಬಿಲ್‌ಗೆ ಸಲಹೆ ಸೇರ್ಪಡೆ, ತಿದ್ದುಪಡಿ ಅಂಗೀಕಾರ :ಸದಸ್ಯರ ಸಲಹೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ಸದಸ್ಯರ ಸಲಹೆ ಆಲಿಸಿದ್ದೇನೆ, ಮೂಲ ಬಿಲ್ನಲ್ಲಿ ಬೇಕಾದರೆ ಸಲಹೆ ಅಳವಡಿಸಿಕೊಳ್ಳೋಣ. ಈಗ ಸಣ್ಣ ತಿದ್ದುಪಡಿ ಇದೆ, ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು. ನಂತರ ವಿಧೇಯಕವನ್ನ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.