ಬೆಂಗಳೂರು: ಆಯುರ್ವೇದ ಮಸಾಜ್ ಬೇಕು ಎಂದು ಗೂಗಲ್ನಲ್ಲಿ ಹುಡುಕಿ ಹೋದ ವ್ಯಕ್ತಿಯೊಬ್ಬನನ್ನು ವೇಶ್ಯಾವಾಟಿಕೆ ಅಡ್ಡಕ್ಕೆ ಬಲವಂತವಾಗಿ ನೂಕಲು ಯತ್ನಿಸಿ, ಆತನಿಂದ ಹಣ ಕಿತ್ತುಕೊಂಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಜೆ.ಪಿ ನಗರ ನಿವಾಸಿ ಜಗದೀಶ್ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಗೂಗಲ್ ವೆಬ್ಸೈಟ್ನಲ್ಲಿ ಆಯುರ್ವೇದಿಕ್ ಮಸಾಜ್ಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸೈಟ್ನಲ್ಲಿ ಪರಿಚಯವಾದ ವ್ಯಕ್ತಿ ಜೆ.ಪಿ ನಗರದ ಸೆಂಟ್ರಲ್ ಮಾಲ್ ಬಳಿ ಬರುವಂತೆ ಮೊದಲು ಹೇಳಿ, ನಂತ್ರ ಜೆ.ಪಿ ನಗರದ 2ನೇ ಹಂತ ರಾಗಿಗುಡ್ಡ ದೇವಸ್ಥಾನ ಹಿಂಭಾಗ ಬರುವಂತೆ ಸೂಚಿಸಿದ್ದಾನೆ.
ನಂತ್ರ ಜಗದೀಶ್ ಅವರನ್ನ ನಂಬಿ ಭೇಟಿಯಾಗಿದ್ದು, ಆರೋಪಿಗಳು ಮೊದಲು ಹಣ ಕೇಳಿದ್ದಾರೆ. ಈ ವೇಳೆ ಜಗದೀಶ್ 12 ಸಾವಿರ ಹಣ ನೀಡಿದ್ದಾರೆ. ನಂತರ ಆರೋಪಿಗಳು ದೂರ ನಿಂತಿದ್ದ ಕಾರನ್ನ ತೋರಿಸಿ ಅದರಲ್ಲಿ ಮಸಾಜ್ ಮಾಡುವ ಹುಡುಗಿಯರು ಇದ್ದಾರೆ, ಹೋಗಿ ಮಸಾಜ್ ಮಾಡ್ಕೊ ಎಂದಿದ್ದಾರೆ. ಈ ವೇಳೆ ಜಗದೀಶ್ ಹುಡುಗಿಯರ ಮಸಾಜ್ ಬೇಡ ನನಗೆ ಆಯುರ್ವೇದ ಮಸಾಜ್ ಬೇಕು. ಇಲ್ಲಂದ್ರೆ, ಹಣ ವಾಪಸ್ಸು ಕೊಡಿ ಎಂದು ಬೇಡಿದ್ದಾರೆ. ಈ ವೇಳೆ ಆರೋಪಿಗಳು ಕ್ಯಾರೆ ಅನ್ನದೇ ಜಗದೀಶ್ರನ್ನು ತಳ್ಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ನಂತರ ಜಗದೀಶ್ ಜೆ.ಪಿನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಎಫ್ಐಆರ್ ಹಾಕಲು ಹಿಂದೇಟು ಹಾಕಿದ್ದಾರೆ. ನಂತ್ರ ಜಗದೀಶ್ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನ ಭೇಟಿ ಮಾಡಿ ದೂರು ನೀಡಿದ ಹಿನ್ನೆಲೆ ಪೊಲೀಸರು ಎಫ್ಐಆರ್ ದಾಖಲಿಸಿ ನಿತ್ಯಾನಂದ ಅನ್ನೋ ಆರೋಪಿಯನ್ನ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
ಹಾಗೆ ಜಗದೀಶ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಸಾಜ್ ಸೆಂಟರ್ ಹುಡುಕುವ ಮೊದಲು ಜಾಗೃತಿಯಿಂದ ಇರಬೇಕೆಂದು ಎಚ್ಚರಿಕೆ ನೀಡಿದ್ದಾರೆ.