ಬೆಂಗಳೂರು: ಸಮಾಜಕ್ಕೆ ಅಂಟಿಕೊಂಡಿರುವ ದೇವದಾಸಿ ಪದ್ಧತಿ ಹಾಗೂ ವೇಶ್ಯಾವಾಟಿಕೆ ಬೇರು ಸಮೇತ ನಿರ್ಮೂಲನೆ ಮಾಡದ ಹೊರತು, ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಹೇಳಿದರು.
ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ
ಕರ್ನಾಟಕ ಪತ್ರಕರ್ತೆಯರ ಸಂಘ ಹಾಗೂ ಗುಡ್ ಜಂಟಿಯಾಗಿ ಆಯೋಜಿಸಿದ್ದ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ದೇವದಾಸಿ ಪದ್ಧತಿ ಹಾಗೂ ವೇಶ್ಯಾವಾಟಿಕೆ ವೃತ್ತಿಯಿಂದ 1 ದಶಲಕ್ಷ ಕೋಟಿ ವ್ಯವಹಾರ ನಡೆಯುತ್ತಿದೆ. 80 ಲಕ್ಷಕ್ಕೂ ಹೆಚ್ಚು ಮಂದಿ ಮಹಿಳೆಯರು ವೇಶ್ಯಾವಾಟಿಕೆ ವೃತ್ತಿಯಲ್ಲಿದ್ದಾರೆ. 1 ಕೋಟಿ 50 ಲಕ್ಷ ಮಹಿಳೆಯರು ಹೊರದೇಶಕ್ಕೆ ಮಾರಾಟ ವಸ್ತುವಾಗಿ ಹೋಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಹೊರದೇಶಗಳಿಗೆ ಹೋಗುತ್ತಿರುವ ಮಹಿಳೆಯರ ಪೈಕಿ ಶೇ.40 ರಷ್ಟು ಅಪ್ರಾಪ್ತ ಹೆಣ್ಣು ಮಕ್ಕಳಿರುವುದು ಶೋಚನೀಯ. ಪ್ರಸ್ತುತ 15 ಲಕ್ಷಕ್ಕೂ ಹೆಚ್ಚು ಅಪ್ರಾಪ್ತ ಹೆಣ್ಣು ಮಕ್ಕಳು ಈ ವೃತ್ತಿಯಲ್ಲಿದ್ದಾರೆ. ಆದ್ದರಿಂದ ಸರ್ಕಾರ ಇವರ ಪುನರ್ ವಸತಿಗೆ ಸೂಕ್ತವಾದ ಯೋಜನೆಗಳನ್ನು ರೂಪಿಸಬೇಕು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಿಕೊಡಬೇಕು ಎಂದರು.
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕಾರಣಗಳಿಂದ ಇಂದು ಸಮಾಜದಲ್ಲಿ ಅಂಟು ರೋಗದಂತೆ ಬೇರೂರಿರುವ ದೇವದಾಸಿ ಪದ್ಧತಿ ಹಾಗೂ ಲೈಂಗಿಕ ಪ್ರಕರಣಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿವೆ. ಇವುಗಳನ್ನು ತೊಡೆದು ಹಾಕಲು ಬಲವಾದ ಕಾನೂನುಗಳ ಅಗತ್ಯವಿದೆ. ಅದರ ಜತೆಗೆ, ಬುಡಸಮೇತ ಬೇರುಗಳನ್ನು ಕಿತ್ತು ಹಾಕಬೇಕಿದೆ. ಕಾನೂನು ಜಾರಿ ಹಾಗೂ ಉಲ್ಲಂಘನೆ ಅಧಿಕಾರವನ್ನು ರಾಜಕೀಯ ಪ್ರತಿನಿಧಿಗಳು ರೂಪಿಸುತ್ತಿದ್ದು, ಎಲ್ಲ ಅಧಿಕಾರವೂ ಪುರುಷರ ಕೈಗೆ ಸೇರುತ್ತಿದೆ. ಸಮಾಜದ ಅರ್ಧದಷ್ಟಿರುವ ಮಹಿಳೆಯರ ಪರ ಸಮರ್ಪಕವಾದ ಕಾನೂನು ರೂಪಿಸಲು ಸಂಸತ್ತು, ವಿಧಾನಸಭೆ ವಿಫಲವಾಗುತ್ತಿವೆ ಎಂದು ಅವರು ಆಪಾದಿಸಿದರು. ಆಳುವ ವರ್ಗಗಳು ಮಹಿಳೆಯರನ್ನು ಕಡೆಗಣಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಇಂದಿಗೂ ಮಹಿಳೆಯರು ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಆರ್ಥಿಕ ಮತ್ತು ರಾಜಕೀಯ ಶಕ್ತಿಯಿಲ್ಲದ ಮಹಿಳೆಯರು ದಬ್ಬಾಳಿಕೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ, ಮಹಿಳೆಯರನ್ನು ಸಶಕ್ತರನ್ನಾಗಿಸಲು ಕಾನೂನು ಅಗತ್ಯವಿದೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಸಮಾಜದಲ್ಲಿ ಭಿಕ್ಷೆ, ವೇಶ್ಯಾವಾಟಿಕೆ, ದೇವದಾಸಿ ಪದ್ಧತಿಯ ದೊಡ್ಡ ಜಾಲವಿದೆ. ಪ್ರತಿ ವರ್ಷ ಲಕ್ಷಾಂತರ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದರ ವಿರುದ್ಧ ಕಠಿಣ ಕಾನೂನು ಅಗತ್ಯವಿದೆ. ದೇವದಾಸಿ ಪದ್ಧತಿಗೆ ಪರಿಶಿಷ್ಟ ಸಮುದಾಯದ ಹೆಣ್ಣು ಮಕ್ಕಳೇ ಬಲಿಯಾಗುತ್ತಿದೆ. ಹೀಗಾಗಿ, ಈ ಸಮುದಾಯದ ಮಹಿಳೆಯರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕೆಲಸ, ಹಣದ ಆಮಿಷವೊಡ್ಡಿ ಈ ವೃತ್ತಿಗೆ ತಳ್ಳುತ್ತಿರುವುದು ಕಂಡುಬಂದಿದೆ. ಈ ಸಾಮಾಜಿಕ ಪಿಡುಗು ತೊಲಗಿಸಲು ಕಾನೂನು ಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶಾಂತಲಾ ಧರ್ಮರಾಜ್, ಪತ್ರಕರ್ತೆ ಅನಿತಾ ಪೈಲೂರು, ಎಚ್ ಎನ್ ಎಲ್ ರಾಷ್ಟ್ರೀಯ ವ್ಯವಸ್ಥಾಪಕ ತಂಗಪೆರುಮಾಳ್ ಪೊನಂಪಾಡಿ ಹಾಗೂ ಟಿ.ರಾಮಾಂಜನೇಯ ಉಪಸ್ಥಿತರಿದ್ದರು.