ಬೆಂಗಳೂರು :ಶಿಕ್ಷಣ ಸಂಸ್ಥೆಗಳ ಆವರಣದಲ್ಲಿರುವ ಉಪಹಾರ ಗೃಹಗಳು, ಬ್ಯಾಂಕ್‌ಗಳು ಮತ್ತು ಸಿಬ್ಬಂದಿಯ ವಸತಿ ಗೃಹದ ಕಟ್ಟಡಗಳಿಗೆ ಆಸ್ತಿ ತೆರಿಗೆ ವಿಧಿಸುವಂತಿಲ್ಲ ಎಂದು ಹೈ ಕೋರ್ಟ್ ಆದೇಶಿಸಿದೆ. ರಾಯಚೂರು ನಗರಸಭೆ ಆಯುಕ್ತರು ಇಲ್ಲಿಯ ನವೋದಯ ಎಜುಕೇಷನ್ ಟ್ರಸ್ಟ್ ನಡೆಸುತ್ತಿರುವ ಕಾಲೇಜು ಕ್ಯಾಂಪಸ್‌ನಲ್ಲಿರುವ ಉಪಹಾರ ಗೃಹ, ಬ್ಯಾಂಕ್, ಸಿಬ್ಬಂದಿ ವಸತಿ ಗೃಹ ಮತ್ತು ಪೆಟ್ರೋಲ್ ಬಂಕ್ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಸುವಂತೆ ನಿರ್ದೇಶಿಸಿ 2012ರ ಆ.17ರಂದು ಡಿಮ್ಯಾಂಡ್ ನೋಟಿಸ್ ನೀಡಿದ್ದರು.
ಇದನ್ನು ಪ್ರಶ್ನಿಸಿ ನವೋದಯ ಶಿಕ್ಷಣ ಟ್ರಸ್ಟ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಜನವರಿ 15 ರಂದು ಈ ಆದೇಶ ನೀಡಿದೆ. ಅಲ್ಲದೇ, ಕರ್ನಾಟಕ ಪೌರಸಭೆಗಳ ಕಾಯ್ದೆ -1964ರ ಸೆಕ್ಷನ್ 04 ಪ್ರಕಾರ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸುತ್ತಿರುವ ಯಾವುದೇ ಜಾಗ ಅಥವಾ ಆಸ್ತಿಯು ತೆರಿಗೆ ಪಾವತಿಯಿಂದ ವಿನಾಯ್ತಿ ಪಡೆದಿರುತ್ತದೆ. ಯಾವುದೇ ಜಾಗ ಮತ್ತು ಕಟ್ಟಡವನ್ನು ಶೈಕ್ಷಣಿಕ ಸಂಸ್ಥೆ ಶೈಕ್ಷಣಿಕ ಸೌಲಭ್ಯಕ್ಕಾಗಿ ಬಳಸುತ್ತಿದ್ದರೆ, ಅದಕ್ಕೆ ಆಸ್ತಿ ತೆರಿಗೆ ಸೇರಿ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಿದೆ.
ಶಿಕ್ಷಣ ಸಂಸ್ಥೆಗಳಿಗೆ ತನ್ನ ಆವರಣದಲ್ಲಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಅಗತ್ಯ ಮೂಲ ಸೌಕರ್ಯಗಳು ಅಗತ್ಯವಿದೆ. ಆದ್ದರಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ -1964ರ ಸೆಕ್ಷನ್ 04 ರಂತೆ ಈ ಪ್ರಯೋಜನವನ್ನು ಶೈಕ್ಷಣಿಕ ಮೂಲ ಸೌಕರ್ಯಗಳಿಗೆ ವಿಸ್ತರಿಸದೇ ಹೋದಲ್ಲಿ ಕಾನೂನು ರೂಪಿಸಿದ ಉದ್ದೇಶ ಈಡೇರದಂತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ.