ಬೆಂಗಳೂರು : "ನ್ಯಾಯಾಂಗ ವ್ಯವಸ್ಥೆ ಇರುವುದೇ ಧರ್ಮ ಸಂಸ್ಥಾಪನೆಗಾಗಿ. ಇಲ್ಲಿ ಕಡೆಗೆ ಉಳಿಯುವುದು ಧರ್ಮ ಮಾತ್ರ. ತಾಯಿ, ತಂಗಿ, ಅಕ್ಕ, ತಮ್ಮ ಯಾರೂ ಲೆಕ್ಕಕ್ಕೆ ಬರುವುದಿಲ್ಲ" ಎಂದು ನ್ಯಾಯಾಂಗ ನಿಂದನೆ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮಂಗಳವಾರ ಹೈಕೋರ್ಟ್ ಅಭಿಪ್ರಾಯಪಟ್ಟಿತು.
ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಮೀನು ಮಾರಾಟ ಮಾಡಿದ 74 ವರ್ಷದ ಹಿರಿಯ ವ್ಯಕ್ತಿಯೊಬ್ಬರು ನ್ಯಾಯಂಗ ನಿಂದನೆಗೊಳಗಾಗಿದ್ದರು. ಈ ಕುರಿತು ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಾಲಯದ ಕಟಕಟೆಯಲ್ಲಿ ಆ ವ್ಯಕ್ತಿ ವಿವರಿಸಿದ ಸತ್ಯಾಂಶವನ್ನು ಪರಿಗಣಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾ.ಹೇಮಲೇಖ ಅವರಿದ್ದ ವಿಭಾಗೀಯ ಪೀಠ ಈ ರೀತಿ ಹೇಳಿದೆ.
ಪ್ರಕರಣವೇನು?: ಮೈಸೂರು ಕಸಬಾ ಹೋಬಳಿ ವ್ಯಾಪ್ತಿಯಲ್ಲಿನ 1.23 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಬಾಕಿ ಇತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿತ್ತು. ಆದರೆ, ಪಕ್ಷಗಾರರಲ್ಲಿ ಒಬ್ಬರಾದ ಅರ್ಜಿದಾರರ ಜಯರಾಂ ಎಂಬುವರು ಈ ಆದೇಶ ಉಲ್ಲಂಘಿಸಿ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದರು. ಇದನ್ನು ಪ್ರಶ್ನಿಸಿ ಮೈಸೂರಿನ ಜಯಲಕ್ಷ್ಮಿಪುರಂನ ವಿನಾಯಕನಗರದ ನಿವಾಸಿ ವಾಸು ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಕಟೆಕಟೆಗೆ ಬಂದಿದ್ದ ಜಯರಾಂ ಅವರಿಗೆ ನ್ಯಾಯಮೂರ್ತಿ ವೀರಪ್ಪ ಅವರು, ಕಟಕಟೆ ಪ್ರವೇಶಿಸುವಂತೆ ಸೂಚಿಸಿದರು. ಕೈ ಮುಗಿದುಕೊಂಡು ಬಂದು ನಿಂತ ಅವರಿಗೆ ಕೋರ್ಟ್ ಅಧಿಕಾರಿ, ಸತ್ಯವನ್ನೇ ನುಡಿಯುತ್ತೇನೆ ಎಂಬ ಪ್ರಮಾಣ ಬೋಧಿಸಿದರು. ವಿಚಾರಣೆ ಮುಂದುವರೆಸಿದ ನ್ಯಾಯಪೀಠ, "ಈ ಆಸ್ತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಈ ಹಿಂದೆ ನ್ಯಾಯಾಲಯ ಆದೇಶಿಸಿತ್ತು. ಆದರೆ ನೀವು ಆದೇಶ ಉಲ್ಲಂಘಿಸಿದ್ದೀರಿ, ಇದು ನಿಜವೇ?" ಎಂದು ಕೇಳಿತು.
ಇದಕ್ಕೆ ಕಟಕಟೆಯಲ್ಲಿದ್ದ ಜಯರಾಂ ತಕ್ಷಣ ಪ್ರತಿಕ್ರಿಯಿಸಿ, "ಹೌದು ಸ್ವಾಮಿ" ಎಂದರು. ಇದರಿಂದ ಅಸಮಾಧಾನಗೊಂಡ ನ್ಯಾಯಪೀಠ, "ನೀವು ತಪ್ಪು ಮಾಡಿದ್ದೀನಿ ಎಂದು ಒಪ್ಪಿಕೊಂಡರೆ ಜೈಲಿಗೆ ಹೋಗುತ್ತೀರಿ" ಎಂದು ಹೇಳಿದೆ. ತಕ್ಷಣವೇ ಎಚ್ಚೆತ್ತುಕೊಂಡ ಜಯರಾಂ, "ಇಲ್ಲ ಸ್ವಾಮಿ, ನಾನು ತಪ್ಪು ಮಾಡಿಲ್ಲ" ಎಂದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, "ಈ ವಯೋವೃದ್ಧರು ಮುಗ್ಥತೆಯಿಂದ ಸತ್ಯವನ್ನೇ ನುಡಿದಿದ್ದಾರೆ. ಕೋರ್ಟ್ ಕೂಡಾ ಸತ್ಯವನ್ನೇ ಎತ್ತಿಹಿಡಿಯಬೇಕಾಗುತ್ತದೆ" ಎಂದು ಉಭಯ ಪಕ್ಷಗಾರರ ಪರ ವಕೀಲರಿಗೆ ಸೂಚನೆ ನೀಡಿತು. ಅಲ್ಲದೇ, ಪ್ರಕರಣದಲ್ಲಿರುವ ಉಭಯ ಪಕ್ಷಗಾರರು ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪ್ರಕರಣ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ತಪ್ಪಿತಸ್ಥರಿಗೆ ಈ ಪೀಠದಲ್ಲಿ ವಿಧಿಸಬಹುದಾದ ಶಿಕ್ಷೆಯನ್ನು ಒಂದೇ ದಿನಕ್ಕೆ ಸೀಮಿತಿಗೊಳಿಸಿದಲ್ಲಿ ಆಸ್ತಿ ಕೈಬಿಡಬೇಕಾಗುತ್ತಿದೆ. ಹೀಗಾಗಿ ಇಬ್ಬರೂ ನಡುವೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಿ" ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ದುಡಿಯಲು ಸಾಮರ್ಥ್ಯವಿರುವ ಪತಿ ಜೀವನಾಂಶ ನೀಡುವಂತೆ ಪತ್ನಿಗೆ ಆದೇಶಿಸಿದರೆ ಸೋಮಾರಿತನಕ್ಕೆ ಬೆಂಬಲಿಸಿದಂತೆ: ಹೈಕೋರ್ಟ್