ಬೆಂಗಳೂರು:ಪ್ರವಾಸಿ ವೀಸಾ ಮೂಲಕ ಭಾರತಕ್ಕೆ ಬಂದು ಧರ್ಮ ಪ್ರಚಾರದಲ್ಲಿ ತೊಡಗಿದ್ದ ಐವರು ತಬ್ಲಿಘಿ ಸಂಘಟನೆಯ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರಿಂದ ಅವರನ್ನು ಬಿಡುಗಡೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.
ಇಂಗ್ಲೆಂಡ್, ಫ್ರಾನ್ಸ್, ಕೀನ್ಯಾ ಹಾಗು ಕಜಕಿಸ್ಥಾನದಿಂದ ಪ್ರವಾಸಿ ವೀಸಾ ಮೂಲಕ ದೇಶಕ್ಕೆ ಬಂದಿದ್ದ ಇಸ್ಮಾಯಿಲ್ ಒಸ್ಮಾನ್ ಶೈಕ್ ಸೇರಿದಂತೆ ಮತ್ತಿತರ ನಾಲ್ವರು ಧಾರ್ಮಿಕ ಪ್ರಚಾರದಲ್ಲಿ ಭಾಗಿಯಾಗಿದ್ದರು. ನಂತರ ಬೆಂಗಳೂರಿಗೆ ಬಂದಿದ್ದ ಈ ಐವರನ್ನು ಕಳೆದ ಮೇ 5ರಂದು ನಗರದ ಕುಮಾರಸ್ವಾಮಿ ಠಾಣೆ ಪೊಲೀಸರು ವಶಕ್ಕೆ ಪಡೆದು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 27 ದಿನಗಳ ಕಾಲ ಜೈಲಿನಲ್ಲಿದ್ದ ಇವರಿಗೆ ನಗರದ 30ನೇ ಎಸಿಎಂಎಂ ಕೋರ್ಟ್ ಬಿಡುಗಡೆ ಭಾಗ್ಯ ನೀಡಿದ್ದು, ಆರೋಪಿಗಳು ದೇಶ ಬಿಟ್ಟು ಹೊರಡುವಂತೆ ಆದೇಶಿಸಿದೆ.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ವಾದಿಸಿ, ವಿದೇಶಿ ಪ್ರಜೆಗಳು ಪ್ರವಾಸಿ ವೀಸಾದ ಮೇಲೆ ದೇಶಕ್ಕೆ ಬಂದು ಧರ್ಮ ಪ್ರಚಾರದಲ್ಲಿ ತೊಡಗಿದ್ದಾರೆ. ಈ ಮೂಲಕ ವೀಸಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ವಿದೇಶಿ ಕಾಯ್ದೆ ಸೆಕ್ಷನ್ 14 ರ ಪ್ರಕಾರ ಆರೋಪಿಗಳಿಗೆ 5 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದ್ದು, ಸೂಕ್ತ ಕ್ರಮ ಜರುಗಿಸುವಂತೆ ನ್ಯಾಯಾಲಯಕ್ಕೆ ಕೋರಿದ್ದರು.
ಆರೋಪಿಗಳ ಪರ ವಕೀಲರು ಅವರ ತಪ್ಪೊಪ್ಪಿಗೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಶಿಕ್ಷೆ ಪ್ರಮಾಣ ಕಡಿತಗೊಳಿಸಿ ಪ್ರಕರಣದಿಂದ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಜತೆಗೆ ಆರೋಪಿಗಳು ಅವರ ಖರ್ಚಿನಲ್ಲೇ ತಮ್ಮ ದೇಶಕ್ಕೆ ಹಿಂದಿರುಗಲು ಸಿದ್ಧರಿದ್ದಾರೆ ಎಂದು ತಿಳಿಸಿದ್ದರು. ವಾದ-ಪ್ರತಿವಾದ ಪರಿಗಣಿಸಿದ ಪೀಠ, ಆರೋಪಿಗಳು ಮೇ 9ರಂದು ಬಂಧನಕ್ಕೊಳಗಾಗಿ ಜಾಮೀನು ಸಿಗುವ ದಿನವಾದ ಜೂನ್ 5 ರವರೆಗೆ 27 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಜತೆಗೆ 10 ಸಾವಿರ ದಂಡ ಪಾವತಿಸಿದ್ದಾರೆ. ವೀಸಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಕಾಯ್ದೆ ಪ್ರಕಾರ ಇವರಿಗೆ 5 ವರ್ಷಗಳ ಕಾಲ ಶಿಕ್ಷೆ ವಿಧಿಸಲು ಅವಕಾಶವಿದೆಯಾದರೂ, ಇವರನ್ನು ಇದೇ ಕಾರಣಕ್ಕೆ ದೇಶದಲ್ಲಿ ಇಟ್ಟುಕೊಳ್ಳುವುದು ಮತ್ತು ಸಾರ್ವಜನಿಕರ ತೆರಿಗೆ ಹಣವನ್ನು ಇವರ ನಿರ್ವಹಣೆಗೆ ವ್ಯಯಿಸುವುದು ಸೂಕ್ತವಲ್ಲ ಎಂದು ತಿಳಿಸಿ ನ್ಯಾಯಾಲಯ ತನ್ನ ವಿವೇಚನಾಧಿಕಾರ ಬಳಸಿ ಆರೋಪಿಗಳನ್ನು ಬಿಡುಗಡೆ ಮಾಡಿದೆ.
ಹಾಗೆಯೇ ಪೊಲೀಸರು ಆರೋಪಿಗಳನ್ನು ದೇಶದಿಂದ ಹೊರಗೆ ಕಳುಹಿಸುವವರೆಗೂ ಬಂಧನ ಕೇಂದ್ರದಲ್ಲಿ ಇಡಬೇಕು. ಮತ್ತು ಅವರ ವೀಸಾ, ಪಾಸ್ಪೋರ್ಟ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ವಾಪಸ್ ಕೊಟ್ಟು ದೇಶದಿಂದ ಹೊರ ಕಳುಹಿಸಬೇಕು ಎಂದು ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿಗಳ ಪರ ಸಿರಾಜುದ್ದೀನ್ ಅಹ್ಮದ್ ವಾದ ಮಂಡಿಸಿದ್ದರು.