ಬೆಂಗಳೂರು : ಕೃಷಿ ಇಲಾಖೆಯಲ್ಲಿ ಏಕಕಾಲಕ್ಕೆ 306 ಅಧಿಕಾರಿಗಳಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಲಾಗಿದೆ.
ಕಳೆದ ಮೂರು ವರ್ಷಗಳಿಂದ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಬಡ್ತಿ ಪ್ರಕ್ರಿಯೆ ಗಮನಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಎಲ್ಲ ಅರ್ಹರಿಗೆ ಪದೋನ್ನತಿ ನೀಡುವಂತೆ ಸೂಚನೆ ನೀಡಿ, ಅಂತಿಮ ಪಟ್ಟಿ ಸಿದ್ದಪಡಿಸಿ ಅನುಮೋದನೆ ನೀಡಿದ್ದಾರೆ.
ಇದರಲ್ಲಿ ಕಲ್ಯಾಣ ಕರ್ನಾಟಕ ಹುದ್ದೆಗಳಿಗೂ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷವಾಗಿದೆ. ಕೃಷಿ ಸಚಿವರ ಆದೇಶದಂತೆ
ಇತ್ತೀಚಿಗೆ 248 ಸಹಾಯಕ ಕೃಷಿ ಅಧಿಕಾರಿಗಳಿಗೆ ಕೃಷಿ ಅಧಿಕಾರಿಗಳ ಹುದ್ದೆಗೆ ಬಡ್ತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಎನ್. ಚಲುವರಾಯಸ್ವಾಮಿ ಅವರು ಕೃಷಿ ಸಚಿವರಾದ ನಂತರ ಕಳೆದ 6 ತಿಂಗಳ ಒಳಗಾಗಿ 550ಕ್ಕೂ ಅಧಿಕ ಅಧಿಕಾರಿಗಳಿಗೆ ಮುಂಬಡ್ತಿ ಸಿಕ್ಕಂತಾಗಿದೆ.
ಇದಲ್ಲದೇ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಾವಿರಕ್ಕೂ ಅಧಿಕ ವಿವಿಧ ತಾಂತ್ರಿಕ (ಕೃಷಿ ಅಧಿಕಾರಿ) ಹುದ್ದೆಗಳನ್ನು ತುಂಬಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೇನು ಅನುಮೋದನೆ ಹಂತದಲ್ಲಿದೆ.
2 ಸಾವಿರ ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು ಎರಡು ಸಾವಿರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲ ಹಂತಗಳಲ್ಲಿ ಕನಿಷ್ಠ 1000 ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರು (ಅಕ್ಟೋಬರ್ -12-23) ತಿಳಿಸಿದ್ದರು.
ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಅಂದು ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ವಿವಿಧ ಹುದ್ದೆಗೆ ನೇಮಕಗೊಂಡವರಿಗೆ ನೇಮಕಾತಿ ಪತ್ರ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಹಿಂದಿನ ಸರ್ಕಾರದಲ್ಲಿ ನೇಮಕಾತಿ ನಡೆಯಲಿಲ್ಲ. ರಾಜ್ಯದಲ್ಲಿ ಹೊಸ ಸರ್ಕಾರ ಬಂದ ನಾಲ್ಕೇ ತಿಂಗಳಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದಿದ್ದರು.
ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ 32 ಅಭ್ಯರ್ಥಿಗಳು ನೇಮಕಗೊಂಡಿದ್ದು, ಎಲ್ಲರಿಗೂ ನೇಮಕಾತಿ ಆದೇಶ ನೀಡಲಾಗುತ್ತಿದೆ ಎಂದಿದ್ದ ಅವರು, ಕೃಷಿ ಇಲಾಖೆಯ ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳ ನೇಮಕಾತಿಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ್ದರು. ಇದಕ್ಕೂ ಮುನ್ನ ಸಚಿವ ಚಲುವರಾಯಸ್ವಾಮಿ ಅವರು ರಾಜ್ಯ ಬೀಜ ನಿಗಮ ಹಾಗೂ ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣದ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು.
ಇದನ್ನೂ ಓದಿ:ಶಾಲಾ ಶಿಕ್ಷಕರ ಬಡ್ತಿ ನಿಯಮಗಳ ಪರಿಷ್ಕರಣೆ ಕುರಿತು ನಿರ್ಧರಿಸಲು ಎಂಎಲ್ಸಿಗಳೊಂದಿಗೆ ಸಭೆ: ಮಧು ಬಂಗಾರಪ್ಪ