ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ 184 ಮಹಿಳಾ ಅಭ್ಯರ್ಥಿಗಳು ಎಲೆಕ್ಷನ್ನಲ್ಲಿ ಸ್ಪರ್ಧಿಸಿದ್ದರು. ಇದರಲ್ಲಿ ಕಾಂಗ್ರೆಸ್ 11, ಬಿಜೆಪಿ 12, ಜೆಡಿಎಸ್ 13 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಫಲಿತಾಂಶದಲ್ಲಿ ಹಾಲಿ ಶಾಸಕಿಯರಲ್ಲಿ ಸೌಮ್ಯಾ ರೆಡ್ಡಿ, ಲಕ್ಷ್ಮೀ ಹೆಬ್ಬಾಳ್ಕರ್, ಎಂ.ರೂಪ ಕಲಾ, ಖನೀಜಾ ಫಾತಿಮಾ, ಶಶಿಕಲಾ ಜೊಲ್ಲೆ ಗೆಲುವಿನ ನಗೆ ಬೀರಿದ್ದಾರೆ. ಡಾ.ಅಂಜಲಿ ನಿಂಬಾಳ್ಕರ್, ಕುಸುಮಾ ಎಚ್, ಪೂರ್ಣಿಮಾ ಶ್ರೀನಿವಾಸ್, ರೂಪಾಲಿ ನಾಯ್ಕ್ ಸ್ಪರ್ಧೆಯಲ್ಲಿ ಸೋತು ಅಧಿಕಾರ ಕಳೆದುಕೊಂಡಿದ್ದಾರೆ.
ಸೌಮ್ಯಾ ರೆಡ್ಡಿ: ಕಾಂಗ್ರೆಸ್ ಹಿರಿಯ ರಾಜಕಾರಣಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಅವರು ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಇವರು ಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿ. 2018 ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎನ್.ಪ್ರಹ್ಲಾದ್ ಬಾಬು ಅವರ ವಿರುದ್ಧ 2 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಸಿ.ಕೆ.ರಾಮಮೂರ್ತಿ ಅವರ ವಿರುದ್ಧ ಸ್ಪರ್ಧಿಸಿದ್ದು, ಸೌಮ್ಯಾ ರೆಡ್ಡಿ 9000 ಮತಗಳ ಅಂತರದಿಂದ ಗೆದ್ದಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್:ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು, 2ನೇ ಸಲ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ನಾಗೇಶ್ ಮುನ್ನೋಳ್ಕರ್ ಅವರ ವಿರುದ್ಧ 56 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿ ಮತ್ತೊಮ್ಮೆ ಶಾಸಕಿಯಾಗಿದ್ದಾರೆ. 2018 ರ ಚುನಾವಣೆಯಲ್ಲಿ ಬಿಜೆಪಿಯ ಸಂಜಯ್ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿ ಶಾಸಕಿಯಾಗಿದ್ದರು. 2013 ರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದು ಸೋಲನುಭವಿಸಿದ್ದರು. 2014 ಲೋಕಸಭೆ ಚುನಾವಣೆಯಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ವಿರುದ್ಧ ಸೋತಿದ್ದರು.
ಡಾ.ಅಂಜಲಿ ನಿಂಬಾಳ್ಕರ್:ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ಪತ್ನಿ, ಕಾಂಗ್ರೆಸ್ ಪಕ್ಷದ ಹಾಲಿ ಶಾಸಕಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ್ 39 ಸಾವಿರ ಮತಗಳಿಂದ ಸೋತಿದ್ದಾರೆ. ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಂಜಲಿ, ಬಿಜೆಪಿ ಪಕ್ಷದ ವಿಠ್ಠಲ್ ಹಳಗೇಕರ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಇವರು 2018 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಗೆದ್ದ ಇಬ್ಬರು ಶಾಸಕಿಯರಲ್ಲಿ ಇವರೂ ಒಬ್ಬರು.
ಎಂ.ರೂಪ ಕಲಾ:ಎಂ.ರೂಪ ಕಲಾ ಶಶಿಧರ್ ಅವರು ಕೋಲಾರದ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಹಾಲಿ ಶಾಸಕಿಯಾಗಿದ್ದು, ಈ ಬಾರಿಯೂ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಮುನಿಯಪ್ಪ ಅವರ ಪುತ್ರಿಯಾದ ರೂಪಕಲಾ 2018 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕೆಜಿಎಫ್ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಈ ಬಾರಿಯೂ ಅದೇ ಕ್ಷೇತ್ರದಿಂದ ಮತ್ತೆ ಅಖಾಡಕ್ಕಿಳಿದಿದ್ದರು. ಕಳೆದ ಬಾರಿ ಅಶ್ವಿನಿ ಸಂಪಂಗಿ ಅವರ ವಿರುದ್ಧ ಗೆದ್ದಿದ್ದರು. ಈ ಬಾರಿಯೂ ಅಶ್ವಿನಿ ಸಂಪಂಗಿ ವಿರುದ್ಧವೇ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ಖನೀಜಾ ಫಾತಿಮಾ:ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಅವರ ಪತ್ನಿ ಖನೀಜಾ ಫಾತಿಮಾ ಅವರು ಕಲಬುರಗಿ ಉತ್ತರ ಕ್ಷೇತ್ರದ ಹಾಲಿ ಶಾಸಕಿ. ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ಅಧಿಕಾರವನ್ನು ಉಳಿಸಿಕೊಂಡಿದ್ದಾರೆ. ಖಮರುಲ್ ಇಸ್ಲಾಂ ಅವರ ನಿಧನದ ಕಾಂಗ್ರೆಸ್ ನಾಯಕರ ಒತ್ತಾಸೆ ಮೇರೆಗೆ ಅವರು 2018 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರ ವಿರುದ್ಧ 5 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ಅದೇ ಕ್ಷೇತ್ರದಲ್ಲಿ ಚಂದ್ರಕಾಂತ್ ಪಾಟೀಲ್ ವಿರುದ್ಧ 2 ಸಾವಿರ ಮತಗಳ ಅಂತರದಿಂದ ಜಯಿಸಿದ್ದಾರೆ.
ಕುಸುಮಾ ಎಚ್:ಕುಸುಮಾ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. 2020 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ಮುನಿರತ್ನ ಅವರ ವಿರುದ್ಧಅವರು ಸೋಲು ಕಂಡಿದ್ದರು. ಈ ಬಾರಿ ಅದೇ ಕ್ಷೇತ್ರದಿಂದ ಮತ್ತೆ ಅಖಾಡಕ್ಕಿಳಿದಿದ್ದು, ಮುನಿರತ್ನ ವಿರುದ್ಧವೇ ಸೆಣಸಾಟ ನಡೆಸಿದ್ದರು. ಕುಸುಮಾರ ಯಾವುದೇ ಪ್ರಯತ್ನವೂ ಕ್ಷೇತ್ರದಲ್ಲಿ ಫಲಿಸದೆ, 11 ಸಾವಿರ ಮತಗಳ ಅಂತರದಿಂದ ಸೋಲುಂಡಿದ್ದಾರೆ.
ಪ್ರಭಾವತಿ ಮಸ್ತಮರಡಿ:ಬೆಳಗಾವಿ ದಕ್ಷಿಣದಲ್ಲಿ ಈ ಬಾರಿ ಕಾಂಗ್ರೆಸ್ ಪ್ರಭಾವತಿ ಮಸ್ತಮರಡಿ ಅವರಿಗೆ ಟಿಕೆಟ್ ನೀಡಲಾಗಿತ್ತು. ಇಲ್ಲಿ ಬಿಜೆಪಿಯ ಹಾಲಿ ಶಾಸಕರಾಗಿದ್ದ ಅಭಯ ಪಾಟೀಲ್, ಪ್ರಭಾವತಿ ಅವರಿಗೆ ಪ್ರಬಲ ಪೈಪೋಟಿ ನೀಡಿ ಅವರನ್ನು ಸೋಲಿಸಿದ್ದಾರೆ. ಹೀಗಾಗಿ ಮಸ್ತಮರಡಿ 64 ಸಾವಿರ ಮತಗಳ ಅಂತರದಿಂದ ಹೀನಾಯ ಸೋಲು ಕಂಡಿದ್ದಾರೆ.
ಶಶಿಕಲಾ ಜೊಲ್ಲೆ:ನಿಪ್ಪಾಣಿ ಕ್ಷೇತ್ರದ ಹಾಲಿ ಶಾಸಕಿ ಆಗಿರುವ ಶಶಿಕಲಾ ಜೊಲ್ಲೆ ಬಿಜೆಪಿ ಸರ್ಕಾರದ ಏಕೈಕ ಮಹಿಳಾ ಸಚಿವೆ ಮತ್ತೊಮ್ಮೆ ಶಾಸಕಿಯಾಗಿ ಮಿಂಚಿದ್ದಾರೆ. 2008 ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಬಳಿಕ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. 2018 ರಲ್ಲಿ ಸತತ 2ನೇ ಬಾರಿಗೆ ಆಯ್ಕೆಯಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವೆಯಾಗಿ ಕೆಲಸ ಮಾಡಿದ್ದರು. ಈ ಬಾರಿ ಮತ್ತೆ ನಿಪ್ಪಾಣಿ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ. ಈ ಬಾರಿಯೂ ಕಾಂಗ್ರೆಸ್ನ ಕಾಕಾ ಸಾಹೇಬ ಪಾಟೀಲ್ ವಿರುದ್ಧ 29 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.
ಪೂರ್ಣಿಮಾ ಶ್ರೀನಿವಾಸ್:ಚಿತ್ರದುರ್ಗದ ಹಿರಿಯೂರು ಕ್ಷೇತ್ರದ ಹಾಲಿ ಶಾಸಕಿಯಾಗಿರುವ ಪೂರ್ಣಿಮಾ ಶ್ರೀನಿವಾಸ್ ಚುನಾವಣೆಯಲ್ಲಿ ಸೋತು ತಮ್ಮ ಅಧಿಕಾರವನ್ನು ಕಳೆದುಕೊಂಡಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 12 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಕೈ ಅಭ್ಯರ್ಥಿ ಸುಧಾಕರ್ ವಿರುದ್ಧ ಸೋತಿದ್ದಾರೆ.