ಬೆಂಗಳೂರು: ‘ಪ್ರಾಜೆಕ್ಟ್ ವರ್ಕ್’ ನಕಲು ಆರೋಪದಡಿ ಕಾನೂನು ವಿದ್ಯಾರ್ಥಿಗೆ ಪರೀಕ್ಷೆಯಲ್ಲಿ ಅಂಕ ನೀಡದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ತರಾಟೆ ತೆಗೆದುಕೊಂಡಿರುವ ಹೈಕೋರ್ಟ್, ವಿದ್ಯಾರ್ಥಿಯ ಪ್ರಾಜೆಕ್ಟ್ ವರ್ಕ್ಅನ್ನು ಕೂಡಲೇ ಮೌಲ್ಯಮಾಪನ ನಡೆಸಿ ಅಂಕ ನೀಡುವಂತೆ ತಾಕೀತು ಮಾಡಿದೆ.
ವಿವಿಯ ಕ್ರಮ ಪ್ರಶ್ನಿಸಿ ವಿದ್ಯಾರ್ಥಿ ಪಿ.ಬಿ.ಹೃದಯ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ಆದೇಶದಲ್ಲಿ, ವಿದ್ಯಾರ್ಥಿ ಇ-ಮೇಲ್ ಮೂಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ವಿವಿ ಹೇಳುತ್ತಿದೆ. ಆದರೆ ವಿವಿ ವಿದ್ಯಾರ್ಥಿಯ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರಾಜೆಕ್ಟ್ ವರ್ಕ್ ನಕಲು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂಬ ತೀರ್ಮಾನಕ್ಕೆ ಬಂದಿದೆ. ವಾಸ್ತವವಾಗಿ ವಿದ್ಯಾರ್ಥಿ ಪ್ರಾಜೆಕ್ಟ್ ವರ್ಕ್ ನಕಲು ಮಾಡಿರುವುದಕ್ಕೆ ಯಾವುದೇ ಸಾಕ್ಷ್ಯಧಾರವಿಲ್ಲ ಎಂದು ಹೇಳಿದೆ.
ಪ್ರಕರಣದಲ್ಲಿ ವಿದ್ಯಾರ್ಥಿಯ ವಿಚಾರಣೆಗೆ ವಿವಿ ಅವಕಾಶ ಮಾಡಿಕೊಟ್ಟಿಲ್ಲ. ಪ್ರಾಥಮಿಕ ವಿಚಾರಣೆಯನ್ನೂ ನಡೆಸಿಲ್ಲ. ಹೀಗಾಗಿ ಮೂರನೇ ಸೆಮಿಸ್ಟರ್ ಪರೀಕ್ಷೆ ತೆಗೆದುಕೊಳ್ಳಲು ಮತ್ತು ನಾಲ್ಕನೇ ಸೆಮಿಸ್ಟರ್‌ಗೆ ಅನುಮತಿ ನಿರಾಕರಿಸಿರುವ ವಿವಿಯ ಆದೇಶ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟು, ವಿವಿಯ ಆದೇಶ ರದ್ದುಪಡಿಸಿದೆ.
ಹಾಜರಾತಿ ಪ್ರಮಾಣ ಕಡಿಮೆ ಇದ್ದರೂ ಕ್ಯಾರಿ ಓವರ್ ಮತ್ತು ಕ್ಯಾರಿ ಫಾರ್ವಡ್ ಆಧಾರದ ಮೇಲೆ ವಿದ್ಯಾಭ್ಯಾಸ ಮುಂದುವರೆಸಲು ಅನುಮತಿ ನೀಡುವಂತೆ ವಿವಿಗೆ ತಾಕೀತು ಮಾಡಿದೆ.
ವಿದ್ಯಾರ್ಥಿ ಹೃದಯ್ 2017-18ನೇ ಸಾಲಿನಲ್ಲಿ 5 ವರ್ಷದ ಬಿಎ-ಎಲ್‌ಎಲ್‌ಬಿ ಕೋರ್ಸ್‌ಗೆ ವಿವಿಯಲ್ಲಿ ಪ್ರವೇಶ ಪಡೆದಿದ್ದ. 2020ರ ಮಾರ್ಚ್ 13ರಂದು ನಡೆದ ‘ಮಕ್ಕಳ ಹಕ್ಕುಗಳ ಕಾನೂನು’ ಪರೀಕ್ಷೆಯಲ್ಲಿ ಎಫ್ ಗ್ರೇಡ್ ಪಡೆದಿರುವಾಗಿ ತಿಳಿಸಿದ್ದ ವಿವಿ, ವಿದ್ಯಾರ್ಥಿಗೆ ಪ್ರಾಜೆಕ್ಟ್ ವರ್ಕ್ ಅಂಕ ನೀಡಿರಲಿಲ್ಲ. ಈ ಬಗ್ಗೆ ವಿವರಣೆ ಕೇಳಿದ್ದಕ್ಕೆ ಪ್ರಾಜೆಕ್ಟ್ ವರ್ಕ್ ನಕಲಿ ಮಾಡಿದ್ದಕ್ಕೆ ಅಂಕ ನೀಡಿಲ್ಲ ಎಂದು ತಿಳಿಸಿತ್ತು. ಜತೆಗೆ ಮೂರನೇ ಸೆಮಿಸ್ಟರ್ ವಿಶೇಷ ಪುನರ್ ಪರೀಕ್ಷೆ ತೆಗೆದುಕೊಳ್ಳಲು ಮತ್ತು ನಾಲ್ಕನೇ ಸೆಮಿಸ್ಟರ್‌ಗೆ ಪ್ರವೇಶ ನಿರಾಕರಿಸಿತ್ತು ಎನ್ನಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ಹೃದಯ್ ಹೈಕೋರ್ಟ್ ಮೆಟ್ಟಿಲೇರಿದ್ದ.