ಬೆಂಗಳೂರು: ಧಾರವಾಡದ ಎನ್. ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಪಬ್ಲಿಕ್ ಶಾಲೆಯ ಕಾರ್ಯ ಚಟುವಟಿಕೆಗಳ ಪ್ರಗತಿ ಪರಿಶೀಲನಾ ಸಭೆ ಇಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆಯಿತು.
ಸಭೆಯಲ್ಲಿನ ಚರ್ಚೆ-ತೆಗೆದುಕೊಂಡ ನಿರ್ಧಾರಗಳು:
- ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಅದಕ್ಕೆ ಕಾರ್ಯಕಲ್ಪ ನೀಡಲು ತೀರ್ಮಾನಿಸಲಾಗಿದೆ.
- ಕಳೆದ 2 ದಶಕಗಳ ಅವಧಿಯಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಹೆಚ್ಚು ಬಾರಿ ಗಳಿಸಿದ್ದು, 2018ರಲ್ಲಿ ಶೇ.83.33 ಹಾಗೂ 2019ರಲ್ಲಿ ಶೇ.77ರಷ್ಟು ಫಲಿತಾಂಶ ಬಂದಿದೆ. ಫಲಿತಾಂಶ ಕುಸಿತವೊಂದೇ ಶಾಲೆಯ ಭವಿಷ್ಯಕ್ಕೆ ತೊಂದರೆ ಆಗಬಾರದು.
- ಪೊಲೀಸರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಇದೇ ಶಾಲೆಯಲ್ಲಿ ಓದಿದವರು ಐಪಿಎಸ್ ಸೇರಿ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.
- ಆಡಳಿತ ಮಂಡಳಿ ಅದಕ್ಷತೆ, ನಿರ್ಲಕ್ಷ್ಯ ಹಾಗೂ ಕಾಣದ ಕೈಗಳ ಹಸ್ತ ಕ್ಷೇಪವು ಶಾಲೆಯಲ್ಲಿ ಮಕ್ಕಳ ಪ್ರವೇಶ ಸಂಖ್ಯೆ ಕುಸಿತಕ್ಕೆ ಕಾರಣ ಎನ್ನುವುದು ದೃಢಪಟ್ಟಿದೆ.
ಸಮ್ಮತಿ:
ಶಾಲೆಯ ಸಮಸ್ಯೆಯ ಬಗ್ಗೆ ಮಾಹಿತಿ ಗೊತ್ತಾಗಿರುವ ಹಿನ್ನೆಲೆ, ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅಗತ್ಯ ಸಿಬ್ಬಂದಿ ಮತ್ತು ಆರ್ಥಿಕ ಬಲ ಕಲ್ಪಿಸಬೇಕು ಎಂದು ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ಸದ್ಯ ಶಾಲೆಯಲ್ಲಿ 80 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲೆ ಮುಂದುವರಿಯಲಿದೆ ಎಂಬ ನಿಚ್ಚಳ ಮಾಹಿತಿ ಲಭ್ಯವಾದ ಬಳಿಕ ಈ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಶಾಲೆ ಹಾಗೂ ಹಾಸ್ಟೆಲ್ ಕಟ್ಟಡಗಳು ಸುಸಜ್ಜಿತವಾಗಿದ್ದು, 12 ಕೋಟಿ ರೂ. ವೆಚ್ಚವಾಗಿದೆ. ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ವೇತನ, ಅಗತ್ಯ ಸವಲತ್ತಿಗೆ ಬೇಕಾದ ಅನುದಾನ ನೀಡಲು ಸಭೆ ಒಪ್ಪಿಗೆ ನೀಡಿದೆ. ಶಾಲೆಯ 8 ಬೋಧಕ ಸಿಬ್ಬಂದಿಯನ್ನು ಖಾಯಂಗೊಳಿಸಬೇಕು ಎಂದು ಹೈಕೋರ್ಟ್ ನೀಡಿರುವ ಆದೇಶ ಜಾರಿಗೆ ತರಲಿದ್ದು, ಅದಕ್ಕಾಗಿ ವೃಂದ ಮತ್ತು ನೇಮಕ ನಿಯಮಾವಳಿಗಳನ್ನು ರಚಿಸಲಿದೆ.