ಬೆಂಗಳೂರು:ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಭೂಸ್ವಾಧೀನ ಮತ್ತು ಪುನರ್ವಸತಿ, ಪುನರ್ನಿರ್ಮಾಣ ಕಾಮಗಾರಿಗಳಿಗೆ ಡಿಸೆಂಬರ್ ಅಂತ್ಯದೊಳಗೆ 3,000 ಕೋಟಿ ರೂ.ಗಳನ್ನು ವೆಚ್ಚ ಮಾಡಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ವಿಕಾಸಸೌಧದಲ್ಲಿಂದು ಪ್ರಗತಿ ಪರಿಶೀಲನೆ ನಡೆಸಿದ ಅವರು, ಪ್ರಸಕ್ತ ಸಾಲಿನಲ್ಲಿ 11,000 ಎಕರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524.256 ಮೀ. ಮಟ್ಟಕ್ಕೆ ನೀರು ನಿಲ್ಲಿಸಲು ಅಗತ್ಯವಿರುವ 76,000 ಎಕರೆಗಳ ಪೈಕಿ 37,000 ಎಕರೆ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತಾಗಕು ಎಂದು ಹೇಳಿದರು.
ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಮುಗಿಸಿ:ಅಣೆಕಟ್ಟೆಯ ಎತ್ತರವನ್ನು 524.256 ಮೀ. ಹೆಚ್ಚಿಸಲು ಮುಳುಗಡೆಯಾಗುವ 20 ಹಳ್ಳಿಗಳ ಪೈಕಿ 4 ಹಳ್ಳಿಗಳ 3700 ಕಟ್ಟಡಗಳಿಗೂ ಪರಿಹಾರ ಹಣವನ್ನು ಪಾವತಿಸಬೇಕು. ಹಳೆಯ ಭೂಸ್ವಾಧೀನ ಕಾಯ್ದೆ4(1)ರ ಅಥವಾ ಪ್ರಸ್ತುತ ಭೂಸ್ವಾಧೀನ ಕಾಯ್ದೆ 11(1)ರಡಿಯಲ್ಲಿ ಅಧಿಸೂಚಿಸಲ್ಪಟ್ಟು ಕಾರಣಾಂತರದಿಂದ ನಿಷ್ಕ್ರಿಯಗೊಂಡಿರುವ ಅಧಿಸೂಚನೆಗಳ ರೈತರ ಜಮೀನು ನೇರ ಖರೀದಿ ಮತ್ತು ಐತೀರ್ಪಿಗೆ ಒಪ್ಪಿದಲ್ಲಿ ಅಂಥವುಗಳನ್ನು ಕೂಡ ಜಿಲ್ಲಾಧಿಕಾರಿ ಮೂಲಕ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ನೀಡಲು ಕ್ರಮ ಕೈಗೊಂಡು ತ್ವರಿತವಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದರು.