ಬೆಂಗಳೂರು: 2023-24ನೇ ಸಾಲಿನ ಮೊದಲ ಅರ್ಧ ವರ್ಷದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯ (ಎಸ್ಡಿಪಿ) ಪ್ರಗತಿ ನಿರಾಶಾದಾಯಕವಾಗಿದೆ. ಬಜೆಟ್ ವರ್ಷದ ಅರ್ಧ ವರ್ಷ ಕಳೆದಿದ್ದರೂ ಹಿಂದುಳಿದ ತಾಲೂಕುಗಳ ಅಭಿವೃದ್ಧಿಯ ಎಸ್ಡಿಪಿ ಅನುಷ್ಠಾನ ಕುಂಟುತ್ತಾ ಸಾಗುತ್ತಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತದೆ. ಅತಿ ಹಿಂದುಳಿದ ತಾಲುಕುಗಳಲ್ಲೂ ಸಮತೋಲಿತ ಅಭಿವೃದ್ಧಿ ಸಾಧಿಸಲು ಎಸ್ಡಿಪಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಡಾ.ನಂಜುಡಪ್ಪ ವರದಿಯಲ್ಲಿ ಉಲ್ಲೇಖಿಸಿದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿನ ಯೋಜನೆಗಳಿಗೆ SDP ಮೂಲಕ ಹೆಚ್ಚಿನ ಅನುದಾನ ನೀಡುವ ಮೂಲಕ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಸರಾಸರಿ 3,000 ಕೋಟಿ ರೂ. ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡುತ್ತದೆ. ಒಟ್ಟು 11 ಇಲಾಖೆಗಳಿಗೆ ಯೋಜನೆಯಡಿ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, 2023-24 ಬಜೆಟ್ ವರ್ಷದ ಅರ್ಧ ವರ್ಷ ಕಳೆದಿದೆ. ಆದರೆ ಅನುದಾನ ಬಳಕೆಯಲ್ಲಿ ನಿರಾಸಕ್ತಿ ಮುಂದುವರಿದಿದೆ. ಪಂಚ ಗ್ಯಾರಂಟಿಯತ್ತ ಚಿತ್ತ ನೆಟ್ಟಿರುವ ಸಿದ್ದರಾಮಯ್ಯಗೆ ಈ ಬಾರಿ ಬರದ ಬರೆಯೂ ಬಿದ್ದಿದೆ. ಈ ಮಧ್ಯೆ ವಿಶೇಷ ಅಭಿವೃದ್ಧಿ ಯೋಜನೆಗೆ ರಾಜ್ಯ ಸರ್ಕಾರ ಆರು ತಿಂಗಳಾದರೂ ಯಾವುದೇ ವಿಶೇಷ ಗಮನ ಹರಿಸದೇ ಇರುವುದು ಸ್ಪಷ್ಟವಾಗಿದೆ.
ವಿಶೇಷ ಅಭಿವೃದ್ಧಿ ಯೋಜನೆ ಪ್ರಗತಿ ಕೇವಲ 14.66%:2023-24 ಆರ್ಥಿಕ ವರ್ಷದ ಮೊದಲ ಆರು ತಿಂಗಳು ಈಗಾಗಲೇ ಕಳೆದು ಹೋಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಹಂಚಿಕೆಯಾದ ಅನುದಾನದಲ್ಲಿ ಈವರೆಗೆ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು ಕೇವಲ 14.66%. ವಿಶೇಷ ಅಭಿವೃದ್ಧಿ ಯೋಜನೆ ಆರು ತಿಂಗಳು ಕಳೆದರೂ ಇನ್ನೂ ಟೇಕಾಫ್ ಆಗಿಲ್ಲ. ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಯೋಜನೆಯ ಪ್ರಗತಿ ಕುಂಟುತ್ತಾ ಸಾಗುತ್ತಿದೆ. ಆರು ತಿಂಗಳಾದರೂ ಆರು ಇಲಾಖೆಗಳು ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ.
ವಿಶೇಷ ಅನುದಾನದ ಹಂಚಿಕೆ ಮಾಹಿತಿ ಮೊದಲ ತ್ರೈಮಾಸಿಕದಲ್ಲಿ ಪ್ರಗತಿ ಶೂನ್ಯ:ಮೊದಲ ತ್ರೈಮಾಸಿಕದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಶೂನ್ಯ ಪ್ರಗತಿಯಾಗಿತ್ತು. ಆದರೆ ಬಳಿಕದ ತ್ರೈಮಾಸಿಕದಲ್ಲಿ ಕೊಂಚ ಪ್ರಗತಿ ಕಂಡಿದೆ. ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ಮಟ್ಟಿಗೆ ಟೇಕಾಫ್ ಕಂಡಿದ್ದು, 14.66% ಪ್ರಗತಿ ಸಾಧಿಸಿದೆ. ಆದರೆ, ಆರ್ಥಿಕ ವರ್ಷದ ಅರ್ಧ ವರ್ಷ ಕಳೆದಿದ್ದರೂ ಕೇವಲ 14.66% ಪ್ರಗತಿ ಕಂಡಿದ್ದು ನಿರಾಶಾದಾಯಕವಾಗಿದೆ. ಅದರಲ್ಲೂ ಈ ಬಾರಿ ಬರದ ಬರೆ ಇದ್ದು, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಎಸ್ಡಿಪಿ ಅನುಷ್ಠಾನಕ್ಕೆ ಚುರುಕು ಮುಟ್ಟಿಸುವ ಅಗತ್ಯ ಇದೆ.
ಕೆಡಿಪಿ ಪ್ರಗತಿ ಮಾಹಿತಿ ಪ್ರಕಾರ, 2023-24ರ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ ಸುಮಾರು 3,046.18 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಸೆಪ್ಟೆಂಬರ್ವರೆಗೆ ಕೇವಲ 516.67 ಕೋಟಿ ರೂ. ಮಾತ್ರ ಹಣ ಬಿಡುಗಡೆ ಮಾಡಲಾಗಿದೆ. 446.47 ಕೋಟಿ ರೂ. ಎಸ್ಡಿಪಿಯಡಿ ವೆಚ್ಚವಾಗಿದೆ. ಅನುದಾನ ಬಿಡುಗಡೆ ಮುಂದೆ ಶೇ.86ರಷ್ಟು ವೆಚ್ಚವಾಗಿದೆ. ಆದರೆ, ಒಟ್ಟು ಹಂಚಿಕೆಯ ಮುಂದೆ ಆಗಿರುವ ವೆಚ್ಚ ಕೇವಲ 14.66% ಮಾತ್ರ.
ಇಲಾಖಾವಾರು ಪ್ರಗತಿ ಹೇಗಿದೆ?:
- ಸಾಮಾಜ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 400 ಕೋಟಿ ರೂ.
ಬಿಡುಗಡೆ- 266.67 ಕೋಟಿ
ವೆಚ್ಚ-216.67 ಕೋಟಿ
ಪ್ರಗತಿ- 54.17% - ಪ.ಪಂಗಡ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 100 ಕೋಟಿ
ಬಿಡುಗಡೆ- 50 ಕೋಟಿ
ವೆಚ್ಚ- 50 ಕೋಟಿ
ಪ್ರಗತಿ- 50% - ಗ್ರಾಮೀಣಾಭಿವೃದ್ಧಿ ಇಲಾಖೆ:
ಅನುದಾನ ಹಂಚಿಕೆ- 423.76 ಕೋಟಿ
ಬಿಡುಗಡೆ- 0
ವೆಚ್ಚ- 5.58 ಕೋಟಿ
ಪ್ರಗತಿ- 1.32% - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 154.95 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ- 0% - ವಸತಿ ಇಲಾಖೆ:
ಅನುದಾನ ಹಂಚಿಕೆ- 500 ಕೋಟಿ
ಬಿಡುಗಡೆ- 75 ಕೋಟಿ
ವೆಚ್ಚ- 106.38 ಕೋಟಿ
ಪ್ರಗತಿ- 21.28% - ಉನ್ನತ ಶಿಕ್ಷಣ ಇಲಾಖೆ:
ಅನುದಾನ ಹಂಚಿಕೆ- 125 ಕೋಟಿ
ಬಿಡುಗಡೆ-0
ವೆಚ್ಚ-0
ಪ್ರಗತಿ-0% - ಆರೋಗ್ಯ ಇಲಾಖೆ:
ಅನುದಾನ ಹಂಚಿಕೆ- 535 ಕೋಟಿ
ಬಿಡುಗಡೆ- 125 ಕೋಟಿ
ವೆಚ್ಚ- 67.83 ಕೋಟಿ
ಪ್ರಗತಿ- 12.68% - ಕೌಶಲ್ಯಾಭಿವೃದ್ಧಿ ಇಲಾಖೆ:
ಅನುದಾನ ಹಂಚಿಕೆ- 100 ಕೋಟಿ
ಬಿಡುಗಡೆ- 0
ವೆಚ್ಚ- 0
ಪ್ರಗತಿ-0% - ಶಿಕ್ಷಣ ಇಲಾಖೆ:
ಅನುದಾನ ಹಂಚಿಕೆ- 482.47 ಕೋಟಿ
ಬಿಡುಗಡೆ-0
ವೆಚ್ಚ-0
ಪ್ರಗತಿ-0% - ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 150 ಕೋಟಿ
ಬಿಡುಗಡೆ-0
ವೆಚ್ಚ-0
ಪ್ರಗತಿ-0% - ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:
ಅನುದಾನ ಹಂಚಿಕೆ- 75 ಕೋಟಿ
ಬಿಡುಗಡೆ- 0
ವೆಚ್ಚ-0
ಪ್ರಗತಿ-0%
ಇದನ್ನೂ ಓದಿ:ಹರಿಹರ ನಗರಸಭೆಯಲ್ಲಿ ಗೆದ್ದಲು ಹಿಡಿಯುತ್ತಿವೆ ಮಹತ್ವದ ಕಡತಗಳು; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೌನ್ಸಿಲರ್‌ಗಳ ಆಕ್ರೋಶ