ಬೆಂಗಳೂರು: 2008ರ ಬೆಂಗಳೂರಿನ ಉತ್ತರಹಳ್ಳಿ ಭಾಗದಿಂದ ಬೇರ್ಪಟ್ಟ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಆಗಿಂದಲೇ ಬಿಜೆಪಿ ಭದ್ರಕೋಟೆಯಾಗಿದ್ದು, ಇಲ್ಲಿ ಎಂ ಸತೀಶ್ ರೆಡ್ಡಿ ಸತತವಾಗಿ ಗೆಲ್ಲುತ್ತಲೇ ಬಂದಿದ್ದಾರೆ. ಕಾಂಗ್ರೆಸ್ ಕಳೆದ ಚುನಾವಣೆವರೆಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದಿರುವುದು ಹಾಗೂ ಪ್ರತಿ ಬಾರಿ ವಿರೋಧ ಪಕ್ಷವಾಗಿ ಜನರ ನಡುವೆ ತೆರಳದೆ ಕೇವಲ ಪಕ್ಷದ ಅಧಿಕಾರಕ್ಕೆ ಮಾತ್ರ ಸೀಮಿತವಾಗಿದ್ದು ಸತೀಶ್ ರೆಡ್ಡಿ ಹ್ಯಾಟ್ರಿಕ್ ಗೆಲುವಿಗೆ ಕಾರಣವಾಗಿದೆ. ನಿತ್ಯ ಜ್ವಲಂತ ಸಮಸ್ಯೆಗಳನ್ನ ಎದುರಿಸುತ್ತಿರುವ ಇಲ್ಲಿ ಗಣನೀಯ ಪ್ರಮಾಣದಲ್ಲಿ ಮುಸ್ಲಿಂ, ಒಕ್ಕಲಿಗ ಮತದಾರರಿದ್ದಾರೆ.
ಬಿಟಿಎಂ ಶಾಸಕ, ಮಾಜಿ ಗೃಹಮಂತ್ರಿ ರಾಮಲಿಂಗಾರೆಡ್ಡಿ, ಮಾಜಿ ರಾಜ್ಯ ಸಭಾ ಸಧಸ್ಯ ಕುಪೇಂದ್ರ ರೆಡ್ಡಿ, ವಿಎಸ್ ಉಗ್ರಪ್ಪರಂತಹ ಘಟಾನುಘಟಿ ನಾಯಕರಿದ್ದರು ಸತೀಶ್ ರೆಡ್ಡಿ ಗೆಲುವಿಗೆ ಬ್ರೇಕ್ ಹಾಕುವಲ್ಲಿ ವಿಫಲರಾಗಿದ್ದರು. ವಲಸಿಗ ಗಾರ್ಮೆಂಟ್ಸ್ ಕಾರ್ಖಾನೆಯ ಮತದಾರರು, ಅಪಾರ್ಟ್ಮೆಂಟ್ ನಿವಾಸಿಗಳು ಹೆಚ್ಚಾಗಿರುವೆಡೆಯೆಲ್ಲಾ ಸತೀಶ್ ರೆಡ್ಡಿ ಹಿಡಿತ ಸಾಧಿಸಿದ್ದರು. ಆಗಾಗ್ಗೆ ಸರ್ಕಾರದ ಕಾರ್ಯಕ್ರಮಗಳನ್ನ ಪಕ್ಷದ ಕಾರ್ಯಕ್ರಮಗಳಂತೆ ಬಿಂಬಿಸಿ ಇಲಾಖೆಗಳ ಅಧಿಕಾರಿಗಳನ್ನ ಸದಾ ಮನೆಗೆ ಕರೆಸಿಕೊಂಡು ಬಿಬಿಎಂಪಿ ಕಚೇರಿಯಾಗಿ ಮಾರ್ಪಟ್ಟಿತ್ತು ಎನ್ನುವುದು ಎಡ ಪಕ್ಷಗಳ ವಾದ.
ಕ್ಷೇತ್ರದಲ್ಲಿ ಮಳೆಗಾಲ ಬಂದರೆ ಹಳ್ಳ ಕೊಳ್ಳ ತುಂಬಿ ರಾಜಕಾಲುವೆ ಮೇಲಿನ ಮನೆಗಳಿಗೆ ನೀರು ತುಂಬಿ ಜಲಾವೃತವಾದರೆ, ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗುತ್ತದೆ. ಆಗಾಗ್ಗೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಗೇಲ್ ಗ್ಯಾಸ್ ಸ್ಫೋಟಗಳು, ಪಾರ್ಕಿಂಗ್, ರಸ್ತೆ ಸಂಚಾರ, ಅಪಕ್ವ ರಸ್ತೆ ಕಾಮಗಾರಿಗಳು ಜನರನ್ನ ಕಾಡುತ್ತಿದ್ದರೂ ಸರ್ಕಾರದ ಅನುದಾನಗಳು ಬಳಕೆಯಾಗಿಲ್ಲ ಎನ್ನುವುದು ನಿವಾಸಿಗಳ ಅಳಲಾಗಿದೆ.
ಸ್ಟಾರ್ ನಟ ದರ್ಶನ್ ಅವರನ್ನು ಕರೆತಂದು ಜನರ ಮುಂದೆ ನಿಲ್ಲಿಸಿ ಮತ ಗಳಿಕೆಗೆ ತಂತ್ರಗಾರಿಕೆ ಹೂಡಿರುವ ಸತೀಶ್ ರೆಡ್ಡಿ ವಿರುದ್ಧ 90,000ಕ್ಕೂ ಅಧಿಕ ಒಕ್ಕಲಿಗ ಮತದಾರರಿರುವ ಈ ಕ್ಷೇತ್ರದಲ್ಲಿ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡನನ್ನು ಕಾಂಗ್ರೆಸ್ ಕಣಕ್ಕಿಳಿಸಿ ಬಿಜೆಪಿಯ ನಿದ್ದೆಗೆಡಿಸಿದೆ. ಕ್ಷೇತ್ರದಲ್ಲಿ ದಲಿತ, ಮುಸ್ಲಿಂ, ಹಿಂದುಳಿದ ವರ್ಗ ಮತ್ತು ಒಕ್ಕಲಿಗ ಮತಗಳನ್ನು ಕಾಂಗ್ರೆಸ್ ಈ ಬಾರಿ ಮನಸ್ಸಿನಲ್ಲಿಟ್ಟುಕೊಂಡು ಚುನಾವಣೆಗೆ ರಣತಂತ್ರ ರೂಪಿಸಿದೆ.