ಕರ್ನಾಟಕ

karnataka

ETV Bharat / state

ಕೆಎಸ್​ಡಿಎಲ್​ನಿಂದ 123 ಕೋಟಿ ಮೊತ್ತದ 852 ಟನ್ ಮಾರ್ಜಕ ಉತ್ಪಾದನೆ; ಸಾರ್ವಕಾಲಿಕ ದಾಖಲೆ - ಕಾಸ್ಮೆಟಿಕ್ಸ್ ಉತ್ಪಾದನೆ

2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು.

Production of 852 tonnes of detergent worth Rs 123.42 crore by KSDL
ಕೆಎಸ್​ಡಿಎಲ್​ನಿಂದ 123.42 ಕೋಟಿ ಮೊತ್ತದ 852 ಟನ್ ಮಾರ್ಜಕ ಉತ್ಪಾದನೆ; ಸಾರ್ವಕಾಲಿಕ ದಾಖಲೆ

By ETV Bharat Karnataka Team

Published : Jan 2, 2024, 8:13 PM IST

ಬೆಂಗಳೂರು: "ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್​ಡಿಎಲ್) 2023ರ ಡಿಸೆಂಬರ್ ತಿಂಗಳೊಂದರಲ್ಲೇ 123.42 ಕೋಟಿ ರೂ. ಮೌಲ್ಯದ 852 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು, ಕಳೆದ 40 ವರ್ಷಗಳಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿದೆ" ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಕಳೆದ ತಿಂಗಳು ಕೆಎಸ್​ಡಿಎಲ್ 852 ಟನ್ ಮಾರ್ಜಕಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು, ಇದುವರೆಗಿನ ದಾಖಲೆಯಾಗಿತ್ತು" ಎಂದಿದ್ದಾರೆ.

"ಕೆಎಸ್​ಡಿಎಲ್​ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜೊತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರವಿತ್ತು. ಸರ್ಕಾರಿ ಉದ್ದಿಮೆಗಳು ಖಾಸಗಿ ವಲಯದಂತೆಯೇ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಈಗ ಈ ವಿಭಾಗದಲ್ಲಿ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ" ಎಂದು ತಿಳಿಸಿದ್ದಾರೆ.

"ಸಂಸ್ಥೆಯು ಮೊದಲಿನಿಂದಲೂ ಸಾಬೂನು ತಯಾರಿಕೆಗೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ಕೂಡ ಅದರ ಸುತ್ತಲೇ ಕೇಂದ್ರೀಕೃತವಾಗಿತ್ತು. ಇತ್ತೀಚೆಗೆ ಮಾರ್ಜಕಗಳ ಉತ್ಪಾದನೆಯತ್ತಲೂ ಹೆಚ್ಚಿನ ಗಮನ ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಫಲ ನೀಡಿದೆ. ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಮಾರ್ಜಕಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆ ಜಾಲವನ್ನು ಕೂಡ ಅಖಿಲ ಭಾರತ ಮಟ್ಟದಲ್ಲಿ ವಿಸ್ತರಿಸಲಾಗುವುದು" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

"ಹೋದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 2023-24ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಸಾಬೂನು, ಮಾರ್ಜಕ ಮತ್ತು ಕಾಸ್ಮೆಟಿಕ್ಸ್ ಉತ್ಪಾದನೆ ನಿಗದಿತ ಗುರಿಗಿಂತ ಹೆಚ್ಚಾಗಿದೆ. ಸಂಸ್ಥೆಯು ಹೋದ ಸಾಲಿನಲ್ಲಿ 118 ಕೋಟಿ ರೂ. ಲಾಭ ಗಳಿಸಿತ್ತು. ಈ ಹಣಕಾಸು ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆಯು 1171.07 ಕೋಟಿ ರೂ. ಮೊತ್ತದಷ್ಟು ವಹಿವಾಟು ನಡೆಸಿದೆ. ಈ ವರ್ಷಕ್ಕೆ ಒಟ್ಟು 1,404 ಕೋಟಿ ರೂ. ವಹಿವಾಟು ನಿಗದಿ ಪಡಿಸಲಾಗಿದ್ದು, ಇದನ್ನು ಮೀರುವುದರಲ್ಲಿ ಅನುಮಾನವಿಲ್ಲ" ಎಂದು ಹೇಳಿದ್ದಾರೆ.

ಮಾಡಾಳ್ ಭ್ರಷ್ಟರ ಕೈಗೆ ಸಿಲುಕಿ ನಲುಗಿದ್ದ ಕೆಎಸ್​ಡಿಎಲ್ ಈಗ ಹೊಸ ದಾಖಲೆ ಬರೆದಿದೆ- ಸಿಎಂ ಸಿದ್ದರಾಮಯ್ಯ:"ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪ್ರಶಾಂತ್ ಮಾಡಾಳ್‌ರಂತಹ ಭ್ರಷ್ಟರ ಕೈಗೆ ಸಿಕ್ಕಿ ನಲುಗಿ ಹೋಗಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ, ನಮ್ಮ ಸರ್ಕಾರದ ಪ್ರಾಮಾಣಿಕ ಕಾಳಜಿಯಿಂದಾಗಿ ನಲವತ್ತು ವರ್ಷಗಳಲ್ಲೇ ಹೊಸ ದಾಖಲೆ ಬರೆದಿದೆ" ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, "ಕಾರ್ಮಿಕರ ಶ್ರಮದಲ್ಲಿ ಸಂಸ್ಥೆ ಬೆಳೆಸಬೇಕಿದ್ದವರು ಕುಟುಂಬದ ಆಸ್ತಿ ಸಂಪಾದನೆಗೆ ಇಳಿದರೆ ಲಾಭದಲ್ಲಿದ್ದ ಸಂಸ್ಥೆ ಹೇಗೆ ಅವಸಾನದತ್ತ ಸರಿಯುತ್ತದೆ ಎಂಬುದಕ್ಕೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಎಸ್‌ಡಿಎಲ್ ಸಾಗಿದ ಹಾದಿ ಉದಾಹರಣೆ. ಅದೇ ಕೆಎಸ್‌ಡಿಎಲ್ ಇಂದು ಹೊಸ ರೂಪದೊಂದಿಗೆ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯುವಷ್ಟು ಬಲಶಾಲಿಯಾಗಿ ನಿಂತಿರುವುದು ನಮ್ಮ ಸರ್ಕಾರದ ಆಡಳಿತ ವೈಖರಿಗೆ ಸಾಕ್ಷಿ" ಎಂದು ತಿಳಿಸಿದ್ದಾರೆ.

"ಸ್ವತಂತ್ರ ಭಾರತದಲ್ಲಿ ಸರ್ಕಾರಿ ಸಂಸ್ಥೆಗಳನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ, ಅವುಗಳ ಉಳಿವಿಗಾಗಿ ಹೋರಾಡುತ್ತಿರುವುದು ಕಾಂಗ್ರೆಸ್ ಪಕ್ಷವೇ. ನಾವು ಕಟ್ಟಿದ ಸಂಸ್ಥೆಯನ್ನು ಮಾರಲು ಅಥವಾ ಭ್ರಷ್ಟಾಚಾರದ ಮೂಲಕ ಕುಟುಂಬದ ಆಸ್ತಿ ಗಳಿಸುವುದೇ ಬಿಜೆಪಿಯವರ ಏಕೈಕ ಉದ್ದೇಶ. ಇದನ್ನು ನಾಡಿನ ಜನತೆ ಅರ್ಥ ಮಾಡಿಕೊಳ್ಳಬೇಕು" ಎಂದಿದ್ದಾರೆ.

ಇದನ್ನೂ ಓದಿ:ಅತಿಥಿ ಉಪನ್ಯಾಸಕರ ಖಾಯಮಾತಿಗೆ ಕಾನೂನು ತೊಡಕಿದೆ: ಸಚಿವ ಎಂ ಸಿ ಸುಧಾಕರ್

ABOUT THE AUTHOR

...view details