ಬೆಂಗಳೂರು : ರಾಜಧಾನಿಯಲ್ಲಿ ಸುಮಾರು 1000 ಕೋಟಿ ಮೌಲ್ಯದ ಬಿಡಿಎ ಸ್ವತ್ತನ್ನು ಕಾನೂನು ಬಾಹಿರವಾಗಿ ಕಬಳಿಕೆ ಮಾಡಲಾಗಿದೆ. ಇದರಲ್ಲಿ ಸ್ಥಳೀಯ ಶಾಸಕರ ಕೈವಾಡ ಇದೆ ಎಂದು ಸಿನಿಮಾ ನಿರ್ಮಾಪಕ, ಒಕ್ಕಲಿಗರ ಸಂಘದ ಪದಾಧಿಕಾರಿ ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಉಮಾಪತಿ ಶ್ರೀನಿವಾಸಗೌಡ ಅವರು ಆರೋಪಿಸಿದರು.
ನಗರದ ಗೋಲ್ಡ್ ಫಿಂಚ್ ಹೋಟೆಲ್ನಲ್ಲಿ ಬಿಡಿಎ ವಿರುದ್ಧದ 1000 ಕೋಟಿ ರೂ ಭೂ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾತನಾಡಿದ ಉಮಾಪತಿ ಶ್ರೀನಿವಾಸಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದ ಒಟ್ಟು 25 ಎಕರೆಗೂ ಹೆಚ್ಚು ಸುಮಾರು 1 ಸಾವಿರ ಕೋಟಿಗಳಿಗೂ ಹೆಚ್ಚಿನ ಬೆಲೆ ಬಾಳುವ ಜಾಗವನ್ನು ಬಿಡಿಎ ಅಧಿಕಾರಿಗಳು ಪ್ರಭಾವಿಗಳ ಜೊತೆ ಶಾಮೀಲಾಗಿ ಭೂಕಬಳಿಕೆ ಮಾಡಿದ್ದಾರೆ ಎಂದು ದೂರಿದರು.
1986-87ರಲ್ಲಿ ಪ್ರಾಥಮಿಕ ಅಧಿಸೂಚನೆ ಆಗಿ 1998ರ ಅಂತಿಮ ಅಧಿಸೂಚನೆಯಾಗಿ ಬಡಾವಣೆ ನಿರ್ಮಾಣಗೊಂಡಿದೆ. ಈ ಬಡಾವಣೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರಾಧಿಕಾರ ತನ್ನ ಅಂತಿಮ ಅಧಿಸೂಚನೆ ಹೊರಡಿಸಿ ಭೂಪರಿಹಾರ ನೀಡಿದೆ. ರಸ್ತೆ, ಯುಜಿಡಿ, ವಿದ್ಯುತ್ ಸೇರಿದಂತೆ ಸುಮಾರು 30 ವರ್ಷಗಳ ಹಿಂದೆಯೇ ₹ 16 ಕೋಟಿ ರೂ. ಬಡಾವಣೆಗಾಗಿ ಖರ್ಚು ಮಾಡಲಾಗಿತ್ತು. ಹೀಗಿದ್ದೂ ಕೆಲವರು ಬಿಡಿಎ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ವಿಭಾಗೀಯ ಪೀಠ ಆದೇಶವನ್ನು ಎತ್ತಿಹಿಡಿದು ಬಿಡಿಎ ಪರವಾಗಿ ಆದೇಶ ನೀಡಿತ್ತು ಎಂದು ಹೇಳಿದರು.
ಹೈಕೋರ್ಟ್ ತೀರ್ಪು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ :2012ರಲ್ಲಿ ಈ ಆದೇಶಗಳ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದಾಗ ವಿಭಾಗೀಯ ಪೀಠದ ಆದೇಶದ ಮನವಿಯನ್ನು ಪುರಸ್ಕರಿಸಿತ್ತು. ಈಗಾಗಲೇ 30 ವರ್ಷಗಳಲ್ಲಿ ಬಡಾವಣೆ ನಿರ್ಮಾಣವಾಗಿದ್ದು, ನಿವೇಶನ ಹಂಚಿಕೆಗಳಂತಹ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದಿಲ್ಲ ಎಂದು ಮನವಿ ತಿರಸ್ಕರಿಸಿತ್ತು ಎಂದು ಮಾಹಿತಿ ನೀಡಿದರು.