ಬೆಂಗಳೂರು: ನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಪ್ರಕರಣದ ಬಳಿಕ ತನಿಖೆಗೆ ಸಣ್ಣ ವಿರಾಮ ನೀಡಲಾಗಿತ್ತು. ಸದ್ಯ ನಿರ್ಮಾಪಕ ಶಂಕರ್ ಗೌಡ ಬಂಧನದ ಮೂಲಕ ಗೋವಿಂದಪುರ ಠಾಣೆ ಪೊಲೀಸರು ಸೆಕೆಂಡ್ ಹಾಫ್ ಶುರುಮಾಡಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಅಂದು ಸಿಸಿಬಿ ಪೊಲೀಸರು ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನು ಬಂಧನ ಮಾಡಿದ್ದೇ ತಡ. ಇಡೀ ಚಿತ್ರರಂಗವೇ ಬೆಚ್ಚಿ ಬಿದ್ದಿತ್ತು. ದೊಡ್ಡ ದೊಡ್ಡ ಸ್ಟಾರ್ ಗಳು ಸೆಲೆಬ್ರೆಟಿಗಳಿಗೆ ಢವಢವ ಅಷ್ಟೇ ಅಲ್ಲಾ ಇದೇ ಕೇಸ್ನಲ್ಲಿ ನಟ ದಿಗಂತ್, ನಟಿ ಐಂದ್ರಿತಾ, ಆ್ಯಂಕರ್ ಅಕುಲ್ ಬಾಲಾಜಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದರು. ಚಿತ್ರರಂಗ ಈ ಶಾಕ್ನಿಂದ ಹೊರ ಬರುವ ಮುನ್ನವೇ ಮತ್ತೋರ್ವ ನಿರ್ಮಾಪಕ ಶಂಕರ್ ಗೌಡ ಡ್ರಗ್ಸ್ ಕೇಸ್ನಲ್ಲಿ ಸಿಲುಕಿದ್ದಾರೆ. ಈತನ ಸಂಪರ್ಕದಲ್ಲಿದ್ದ ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ನ ಹಲವು ನಟ-ನಟಿಯರಿಗೆ ಈಗ ಢವಢವ ಶುರುವಾಗಿದೆ.
ತಮ್ಮ ಕಚೇರಿಯಲ್ಲೇ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ನಿರ್ಮಾಪಕ ಶಂಕರೇಗೌಡ:
ಶಂಕರ್ ಗೌಡ ಸಂಜಯ್ ನಗರದ ತಮ್ಮ ಕಚೇರಿಯಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ವಾಸನೆ ಗೋವಿಂದಪುರ ಠಾಣೆ ಪೊಲೀಸರ ಮೂಗಿಗೆ ಬಡಿದಿದೆ. ಅಷ್ಟೇ ಅಲ್ಲಾ, ಕೆಲವು ಫ್ಯಾಷನ್ ಶೋಗಳನ್ನು ಆಯೋಜಿಸಿ, ಅಲ್ಲಿಗೆ ಬರುವ ಮಂದಿಗೆ ಡ್ರಗ್ಸ್ ಪೆಡ್ಲರ್ ಜಾನ್ ಹಾಗೂ ಬಿಗ್ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮೂಲಕ ಡ್ರಗ್ಸ್ ತರಿಸಿಕೊಂಡು ನಶೆಯಲ್ಲಿ ತೇಲಾಡಿಸ್ತಿದ್ದ ಎನ್ನಲಾಗ್ತಿದೆ. ಇದನ್ನು ಖಚಿತಪಡಿಸಿಕೊಂಡು ಎಲ್ಲಾ ಸಾಕ್ಷ್ಯಾಧಾರ ಕಲೆಹಾಕಿದ ಖಾಕಿ ಪಡೆ ಮಾರ್ಚ್ 8ರಂದು ಸಂಜಯ ನಗರದಲ್ಲಿರುವ ಶಂಕರೇಗೌಡ ಕಚೇರಿ ಮೇಲೆ ದಾಳಿ ಮಾಡಿದ್ದರು. ಹಲವು ಬಾರಿ ಠಾಣೆಗೆ ಕರೆಯಿಸಿ ವಿಚಾರಣೆ ಬಳಿಕ ಬಂಧಿಸಿದ್ದಾರೆ.