ಬೆಂಗಳೂರು: ಹಿರಿಯ ನಟ ದ್ವಾರಕೀಶ್ ಮನೆಗೆ ಹೋಗಿ ಗಲಾಟೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಸ್ವರೂಪವಲ್ಲದ ಅಪರಾಧ (ಎನ್ಸಿಆರ್) ಪ್ರಕರಣ ಸಂಬಂಧ ಠಾಣೆಯಲ್ಲಿ ನಿರ್ಮಾಪಕ ಜಯಣ್ಣ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.
ಜ.31ರಂದು ದ್ವಾರಕೀಶ್ ಮನೆಗೆ ಹೋಗಿದ್ದು ನಿಜ. ದ್ವಾರಕೀಶ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಹಿರಿಯರು. ಅವರ ಜೊತೆ ನಾವು ಗಲಾಟೆ ಮಾಡಿಲ್ಲ. ಮಾಡುವುದು ಇಲ್ಲ. ಕೊಟ್ಟಿರುವ ಹಣವನ್ನು ಹೋಗಿ ಕೇಳಿದ್ದು ನಿಜ. ನಾವು ನಾಲ್ಕು ಮಂದಿಯಲ್ಲಿ ಯಾರು ಕೂಡ ಗಲಾಟೆ ಮಾಡಿಲ್ಲ ಎಂದು ನಿರ್ಮಾಪಕರಾದ ಜಯಣ್ಣ ಹಾಗೂ ರಮೇಶ್ ಅವರು ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಣಕಾಸಿನ ವ್ಯವಹಾರದ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಹಣ ಪಡೆಯುವುದಾಗಿ ಹೇಳಿದ್ದಾರೆ. ಇವರ ಹೇಳಿಕೆ ದಾಖಲಿಸಿಕೊಂಡು ಹೆಚ್ಎಸ್ಆರ್ ಲೇಔಟ್ ಪೊಲೀಸರು ದೂರು ನೀಡಿದ್ದ ದ್ವಾರಕೀಶ್ ಪುತ್ರ ಯೋಗಿಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.
ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ಭವ ಚಿತ್ರ ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡದ ಕಾರಣ ನಿರ್ಮಾಪಕರಿಗೆ ಹಣ ನಷ್ಟವಾಗಿತ್ತು. ಚಿತ್ರ ನಿರ್ಮಾಣಕ್ಕಾಗಿ ಸಾಲ ಪಡೆದಿದ್ದ ದ್ವಾರಕೀಶ್ ಸಕಾಲಕ್ಕೆ ಹಣ ನೀಡದ ಕಾರಣ ನಿರ್ಮಾಪಕರು ಜ.31 ರಂದು ಮನೆಗೆ ಹೋಗಿ ಹಣ ನೀಡುವಂತೆ ಒತ್ತಡ ಹಾಕಿ ದಾಂಧಲೆ ನಡೆಸಿದ್ದರು ಎಂದು ಆರೋಪಿಸಿ ಹೆಚ್ಎಸ್ಆರ್ ಪೊಲೀಸ್ ಠಾಣೆಯಲ್ಲಿ ದ್ವಾರಕೀಶ್ ಪುತ್ರ ಯೊಗೀಶ್ ದೂರು ನೀಡಿದ್ದರು.