ಬೆಂಗಳೂರು:ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ (ಬಿಬಿಎಂಪಿ ಹೊರತುಪಡಿಸಿ) ಎಲ್ಲಾ ಮನೆಗಳಿಗೆ ಸಾರ್ವತ್ರಿಕವಾಗಿ ಸುರಕ್ಷಿತ ಕುಡಿಯುವ ನೀರಿನ ನಳ ಸಂಪರ್ಕ ಪಡೆಯುವ ಕಾರ್ಯವಿಧಾನದ ಸರಳೀಕರಿಸಿ ಸುತ್ತೋಲೆ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಜಲ ನೀತಿ 2019 ರಂತೆ ರಾಜ್ಯದ ನಗರಗಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿನ ಎಲ್ಲಾ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಕೈಗೆಟಕುವ ದರದಲ್ಲಿ ಕೊಳವೆ ಸಂಪರ್ಕದ ಮೂಲಕ ಒದಗಿಸುವ ಉದ್ದೇಶ ಇದಾಗಿದೆ.
ಸದ್ಯ ನಗರ ಸ್ಥಳೀಯ ಸಂಸ್ಥೆಗಳಿಂದ ಕುಡಿಯುವ ನೀರಿನ ನಳ ಸಂಪರ್ಕ ನೀಡಲು ಹಲವು ದಾಖಲೆಗಳು ಬೇಕಾಗಿದ್ದು, ಜಟಿಲ ಕಾರ್ಯವಿಧಾನ ಅನುಸರಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಸಂಪರ್ಕ ಪಡೆಯಲು ತೊಂದರೆಯಾಗುತ್ತಿದೆ. ಹೀಗಾಗಿ ಮನೆಗಳಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಕಾರ್ಯವಿಧಾನವನ್ನು ನಗರಾಭಿವೃದ್ಧಿ ಇಲಾಖೆ ಸರಳೀಕರಣಗೊಳಿಸಿದೆ.
ಏನೆಲ್ಲ ಬದಲಾವಣೆ?: ಸಂಸ್ಥೆಗಳು ಕುಡಿಯುವ ನೀರಿನ ನಳ ಸಂಪರ್ಕ ನೀಡಲು ಕೇಳುತ್ತಿರುವ ದಾಖಲೆಗಳು ಇಲ್ಲದ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ನಷ್ಟ ಭರ್ತಿ ಮುಚ್ಚಳಿಕೆ ಪಡೆದುಕೊಂಡು ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲು ಸೂಚಿಸಲಾಗಿದೆ. ಮುಚ್ಚಳಿಕೆಯನ್ನು ನಿಗದಿತ ನಮೂನೆಯಲ್ಲಿ ರೂ.50 ಸ್ಟ್ಯಾಂಪ್ ಪೇಪರ್‌ನಲ್ಲಿ ವಿಳಾಸದ ಪುರಾವೆಯೊಂದಿಗೆ (ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ/ಬ್ಯಾಂಕ್ ಪಾಸ್ ಬುಕ್, ಪಾಸ್ ಪೋರ್ಟ್/ರೇಷನ್ ಕಾರ್ಡ್, ಬಿಪಿಎಲ್ ಕಾರ್ಡ್, ರೇಷನ್ ಕಾರ್ಡ್) ಇವುಗಳಲ್ಲಿ ಯಾವುದಾದರೊಂದನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಮಾಲೀಕತ್ವ ಹೊಂದಿಲ್ಲದ ತಾವು ವಾಸಿಸುತ್ತಿರುವ ಗೃಹಮನೆಗೆ ಕುಡಿಯುವ ನೀರು ಸರಬರಾಜು ಸಂಪರ್ಕ ಹೊಂದಿದ ಪರಿಣಾಮವಾಗಿ ಸಂಸ್ಥೆಗೆ ಯಾವುದೇ ವಿವಾದ/ನಷ್ಟ ಉಂಟಾದಲ್ಲಿ ಅರ್ಜಿದಾರರೇ ಆ ನಷ್ಟಭರ್ತಿ ಮಾಡಲು ಜವಾಬ್ದಾರರಾಗಿರುತ್ತಾರೆ ಎಂದು ನಷ್ಟ ಭರ್ತಿ ಮುಚ್ಚಳಿಕೆನ್ನು ಪಡೆಯಬೇಕು. ಸಂಸ್ಥೆಗೆ ಭರಿಸಲು ವಿಫಲವಾದಲ್ಲಿ ಅಂತಹ ಮೊಬಲಗನ್ನು ಕಟ್ಟಡದ ಅರ್ಜಿದಾರ/ಮಾಲೀಕರನ್ನು ಜವಾಬ್ದಾರರನ್ನಾಗಿಸಿ ಅವರಿಂದ ಭೂ ಕಂದಾಯ ಅಧಿನಿಯಮದಂತೆ ಭೂ ಕಂದಾಯ ಬಾಕಿ ರೂಪದಲ್ಲಿ ವಸೂಲು ಮಾಡಲು ಕ್ರಮವಹಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ:ಖಾನಾಪುರದ 100 ಗ್ರಾಮಗಳ ಪ್ರತಿ ಮನೆಗೆ ಕುಡಿಯುವ ನೀರು ಯೋಜನೆ: ಸಿಎಂ ಬಸವರಾಜ್ ಬೊಮ್ಮಾಯಿ