ಬೆಂಗಳೂರು: ರೈತರು ಸೇರಿದಂತೆ ಎಷ್ಟೋ ಮಂದಿಗೆ ಇ-ಸ್ವತ್ತು ಬಗ್ಗೆ, ಆಸ್ತಿ ನೋಂದಣಿ ಕುರಿತು ಮಾಹಿತಿ ತಿಳಿದಿರುವುದಿಲ್ಲ. ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ ಆಸ್ತಿಗಳನ್ನು ನೋಂದಣಿ ಮಾಡುವ ಪ್ರಕ್ರಿಯೆ ಹೇಗೆ ಇರುತ್ತದೆ ಮತ್ತು ಇ-ಸ್ವತ್ತು ಅಂದರೆ ಏನು?. ಆಸ್ತಿಗೆ ಇ-ಸ್ವತ್ತು ಮಾಡುವ ಪ್ರಕ್ರಿಯೆ ಹೇಗೆ ಇರುತ್ತದೆ ಎಂಬ ಮಾಹಿತಿ ಇಲ್ಲಿದೆ. ಗ್ರಾಮ ಪಂಚಾಯತಿಯಲ್ಲಿರುವ ಆಸ್ತಿಗಳನ್ನು ಯಾವ ರೀತಿ ಫಾರ್ಮ್-9 ಮತ್ತು ಫಾರ್ಮ -11 ಇ-ಸ್ವತ್ತು ಅಡಿಯಲ್ಲಿ ಮಾಡಿಕೊಳ್ಳಬಹುದು?.
ಇ-ಸ್ವತ್ತಿಗೆ ಅರ್ಜಿ ಸಲ್ಲಿಸಲು ಏನೆಲ್ಲಾ ದಾಖಲೆಗಳು ಬೇಕು? ಎಂಬುದನ್ನು ತಿಳಿದುಕೊಳ್ಳಬಹುದು. ಸಾರ್ವಜನಿಕರು ಗ್ರಾಮ ಪಂಚಾಯಿತಿ ಅಡಿ ಆಸ್ತಿ ಖರೀದಿ ಮಾಡಿದರೆ ನಿವೇಶನ ಅಥವಾ ಮನೆ ಖರೀದಿ ಮಾಡಿದರೆ ಅಥವಾ ಈಗಿರುವ ಆಸ್ತಿಗಳನ್ನು ಸರ್ಕಾರ ಸಿದ್ದಪಡಿಸಿರುವ ಇ-ಸ್ವತ್ತು ಎನ್ನುವ ತಂತ್ರಾಂಶದಿಂದ ಆಸ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ವಿಶಿಷ್ಟ ಸಂಖ್ಯೆಯನ್ನು ಪಡೆದುಕೊಂಡು ಆಸ್ತಿಯನ್ನು ನಮ್ಮದಾಗಿಸಿಕೊಳ್ಳುವುದೇ ಇ-ಸ್ವತ್ತು.
ಇ-ಸ್ವತ್ತು ಮಾಡಿಸಬೇಕಾದರೆ ಬೇಕಿರುವ ದಾಖಲೆ: ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ/ ಡ್ರೈವಿಂಗ್ ಲೈಸೆನ್ಸ್, ಆಸ್ತಿಯ ಮಾಲೀಕತ್ವದ ದಾಖಲೆಗಳು, ಚೆಕ್ಕುಬಂದಿ ವಿವರ, ಅರ್ಜಿದಾರರ ಪೋಟೊ, ನಿವೇಶನದ ನಕ್ಷೆ, ಕ್ರಯಪತ್ರ, ಪಹಣಿ ಪತ್ರ, ಕಟ್ಟಡದ ತೆರಿಗೆ ರಶೀದಿ ಪತ್ರ ಅಥವಾ ವಿದ್ಯುತ್ ಬಿಲ್ ಇತ್ಯಾದಿ ದಾಖಲೆಗಳು ಬೇಕಾಗುತ್ತದೆ.
ಇ-ಸ್ವತ್ತು ಪಡೆಯುವುದು ಹೇಗೆ? : ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು. ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ದಾಖಲೆಗಳನ್ನು ಮತ್ತು ಸ್ಥಳದ ಪರಿಶೀಲನೆಯನ್ನು ನಡೆಸುತ್ತಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಇ-ಸ್ವತ್ತು ತಂತ್ರಾಂಶದ ಮೂಲಕ ನಿಮ್ಮ ಅರ್ಜಿಯನ್ನು ಅಪ್ಲೋಡ್ ಮಾಡಿ ಆಸ್ತಿ ನಕ್ಷೆ ಪಡೆಯಲು ಮೋಜಣಿಗೆ ವರ್ಗಾಯಿಸುತ್ತಾರೆ. ನಂತರ ನಾಡಕಚೇರಿಯಲ್ಲಿ ಮೋಜಣಿಗಾಗಿ ಶುಲ್ಕವನ್ನು ಪಾವತಿಸಿ, ಸ್ವೀಕೃತಿ ಪತ್ರ ಪಡೆದುಕೊಳ್ಳಬೇಕು ಎಂದು ನಾಡಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ನಂತರ 21 ದಿನಗಳ ಒಳಗಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅರ್ಜಿದಾರರು ಮತ್ತು ಬಾಜುದಾರರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಯುತ್ತದೆ. ನಿಮ್ಮ ಆಸ್ತಿಗೆ ನಕ್ಷೆ ಬಂದ ನಂತರ ದ್ವಿತೀಯ ದರ್ಜೆ ಸಹಾಯಕ ಮೂಲಕ ಅದನ್ನು ಅನುಮೋದಿಸಿ ಕಾರ್ಯದರ್ಶಿ ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಳುಹಿಸಲಾಗುತ್ತದೆ. ಬಳಿಕ ಇ-ಸ್ವತ್ತಿನ ಮೇಲೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಡಿಜಿಟಲ್ ಸಹಿ ಮಾಡುವ ಮೂಲಕ ಅನುಮೋದಿಸುತ್ತಾರೆ. ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದರೆ 45 ದಿನಗಳ ಒಳಗಾಗಿ ಇ - ಸ್ವತ್ತು ನೀಡಬೇಕೆಂಬ ನಿಯಮ ಕೂಡ ಇದೆ.