ಬೆಂಗಳೂರು:ರಾಜ್ಯದಲ್ಲಿ ಖಾಲಿ ಇರುವ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆ ಕುಮಾರ ಬಂಗಾರಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗದಿಂದ 1142 ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಲು ಪತ್ರ ಬರೆಯಲಾಗಿದೆ. ಅದರನ್ವಯ 190 ಪುರುಷ ಹಾಗೂ 202 ಮಹಿಳಾ ನಿಲಯ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಲೋಕಸೇವಾ ಆಯೋಗವು ಪ್ರಕಟಿಸಿದೆ. ಆದಷ್ಟು ಶೀಘ್ರ ಇವರುಗಳಿಗೆ ಸ್ಥಳ ನಿಯುಕ್ತಿ ಮಾಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಈಗ ಕೆಪಿಎಸ್ಸಿ ನೀಡುವ ಪಟ್ಟಿಯ ಪ್ರಕಾರ ಮೇಲ್ವಿಚಾರಕರನ್ನು ವಿದ್ಯಾರ್ಥಿನಿಲಯಗಳಿಗೆ ಸ್ಥಳ ನಿಯುಕ್ತಿ ಮಾಡುತ್ತೇವೆ. ಇದಾದ ನಂತರವೂ ಖಾಲಿ ಉಳಿದರೆ ಗುತ್ತಿಗೆ ಆಧಾರದ ಮೇಲೆ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಈಗ ಖಾಲಿ ಇರುವ ಮೇಲ್ವಿಚಾರಕರ ಹುದ್ದೆಗಳಿಗೆ ನಿಯೋಜನೆ ಮೇಲೆ ಮೇಲ್ವಿಚಾರಕರನ್ನು ನೇಮಿಸಿ ವಿದ್ಯಾರ್ಥಿ ನಿಲಯಗಳ ಮಕ್ಕಳ ಸುರಕ್ಷತೆ, ವಿದ್ಯಾಭ್ಯಾಸ ಹಾಗೂ ಇನ್ನಿತರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಅವರು ಹೇಳಿದರು.
ಗ್ರಾಮ ಗ್ರಂಥಾಲಯ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉಪಯೋಗಿಸದ ಅಂಬೇಡ್ಕರ್ ಭವನವನ್ನು ಗ್ರಾಮ ಗ್ರಂಥಾಲಯವಾಗಿ ಪರಿವರ್ತಿಸಲಾಗುವುದು ಎಂದು ಪೂಜಾರಿ ಅವರು, ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದರು.
ಅಪೂರ್ಣಗೊಂಡಿರುವ ಅಂಬೇಡ್ಕರ್ ಭವನವನ್ನು ಅನುದಾನದ ಕೊರತೆಯಾಗದಂತೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಹೆಚ್ಚುವರಿ ಅನುದಾನ ನೀಡಬೇಕೆಂಬ ಬೇಡಿಕೆ ನ್ಯಾಯಯುತವಾಗಿದೆ. ಅರಕಲಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಅಪೂರ್ಣಗೊಂಡ ಅಂಬೇಡ್ಕರ್ ಭವನಗಳಿಗೆ ಹೆಚ್ಚಿನ ಅನುದಾನದ ಆವಶ್ಯಕತೆ ಇದೆ. ಈ ಅಧಿವೇಶನ ಮುಗಿದ ಒಂದು ವಾರದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಅರಕಲಗೂಡು ವಿಧಾನಸಭಾ ಕ್ಷೇತ್ರ 25 ಅಂಬೇಡ್ಕರ್ ಭವನ ಮಂಜೂರಾಗಿದ್ದು, 18 ಭವನಗಳು ಪೂರ್ಣಗೊಂಡಿವೆ. ಐದು ಪ್ರಗತಿಯಲ್ಲಿದ್ದು, ಒಂದು ಭವನದ ನಿರ್ಮಾಣ ಸ್ಥಗಿತಗೊಂಡಿದೆ. ಹಳ್ಳಿ ಮೈಸೂರು ಹೋಬಳಿ ಕೇಂದ್ರದಲ್ಲಿ ನಿವೇಶನ ಪಡೆದು ಭವನ ನಿರ್ಮಾಣ ಮಾಡಬೇಕಿದೆ ಎಂದರು. ಪಕ್ಷಭೇದ ಮರೆತು ಹಲವು ಶಾಸಕರು ಅಪೂರ್ಣಗೊಂಡ ಅಂಬೇಡ್ಕರ್ ಭವನಕ್ಕೆ ಅನುದಾನದ ಕೊರತೆ ಇದೆ ಎಂದು ಸಚಿವರ ಗಮನ ಸೆಳೆದರು.
ತೋಟಗಾರರ ಹುದ್ದೆ ನೇಮಕಾತಿ ಪ್ರಕ್ರಿಯೆ: 200 ತೋಟಗಾರರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು, ಕಾಂಗ್ರೆಸ್ ಸದಸ್ಯ ಅಮರೇಗೌಡ ಬಯ್ಯಾಪುರ ಅವರ ಪ್ರಶ್ನೆಗೆ ಉತ್ತರಿಸಿದರು. ಇಲಾಖೆಯಲ್ಲಿ 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಕಳೆದ ಮೇ 8ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿ ಮೇಲೆ ಸಲ್ಲಿಸಿರುವ ಆಕ್ಷೇಪಗಳ ಅರ್ಜಿಗಳು ಪರಿಶೀಲನಾ ಹಂತದಲ್ಲಿದೆ ಎಂದರು.